ಖಮರೂಬಿ ಹಾಲು ಉತ್ಪಾದಕರ ಸಂಘದ ನೂತನ ಉಪಾಧ್ಯಕ್ಷ

4-pnp 1
ಪಾಂಡವಪುರ ಪಟ್ಟಣದ ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಖಮರೂಬಿ ಅವರನ್ನು ಸಂಘದ ಆಡಳಿತ ಮಂಡಳಿ ನಿರ್ದೇಶಕರು ಅಭಿನಂದಿಸಿದರು. ಸಂಘದ ಅಧ್ಯಕ್ಷ ಪ್ರಶಾಂತ್‌ಕುಮಾರ್, ನಿರ್ದೇಶಕರಾದ ಹೇಮಂತ್‌ಕುಮಾರ್, ಮಧು ಇತರರು ಇದ್ದರು.
Published on

ಪಾಂಡವಪುರ: ಪಟ್ಟಣದ ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ರೈತ ಸಂಘ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ಖಮರೂಬಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯದಂತೆ ಈ ಹಿಂದಿನ ಉಪಾಧ್ಯಕ್ಷೆ ಬಿ.ಎನ್.ರಾಧಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಉಪಾಧ್ಯಕ್ಷಗಾದಿಗೆ ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷೆಗಾದಿ ಬಯಸಿ ಬೇರೊಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧಿಕಾರಿ ಹೇಮಲತಾ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಒಟ್ಟು 11 ಸದಸ್ಯರ ಬಲದ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ನಿಧನರಾಗಿದ್ದು, ಉಳಿದಂತೆ 9 ನಿರ್ದೇಶಕರು ಖಮರೂಬಿ ಅವರನ್ನು ಬೆಂಬಲಿಸಿದರು.

ಉಪಾಧ್ಯಕ್ಷರ ಆಯ್ಕೆ ಬಳಿಕ ಸಂಘದ ಅಧ್ಯಕ್ಷ ಪ್ರಶಾಂತ್‌ಕುಮಾರ್ ಮಾತನಾಡಿ, ಸಂಘದ ಈ ಹಿಂದಿನ ಉಪಾಧ್ಯಕ್ಷೆ ಬಿ.ಎನ್.ರಾಧಾ ಹಾಗೂ ಎಲ್ಲ ನಿರ್ದೇಶಕರ ಸಹಕಾರದಿಂದ ಸಂಘ ಲಾಭದಾಯಕವಾಗಿ ನಡೆಯುತ್ತಿದೆ. ನೂತನ ಉಪಾಧ್ಯಕ್ಷರು ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಇದಕ್ಕೂ ಮುನ್ನ ಮೃತ ಷೇರುದಾರ ಸದಸ್ಯನ ಕುಟುಂಬಕ್ಕೆ ವರ್ಗಕ್ಕೆ ಡೇರಿ ವತಿಯಿಂದ ಚೆಕ್ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಪ್ರಶಾಂತ್‌ಕುಮಾರ್, ಮಾಜಿ ಉಪಾಧ್ಯಕ್ಷೆ ಬಿ.ಎನ್.ರಾಧಾ, ನಿರ್ದೇಶಕರಾದ ಹೇಮಂತ್‌ಕುಮಾರ್, ಹೊನ್ನೇಗೌಡ, ಮಧು, ಮಧುಸೂದನ್, ನಾಗಮ್ಮ, ತಿಮ್ಮಮ್ಮ ಗ್ರಾಮಸ್ಥರಾದ ಪಿ.ಮಂಜುನಾಥ್, ಕೆ.ಕೃಷ್ಣ (ಜಲೀಲ್), ಹೊಸಕೋಟೆ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net