ಸಂಪಿಗೆಹಳ್ಳಿ ಪಿಜಿಯಲ್ಲಿ ವಾಸವಿದ್ದ ಖಲಿಸ್ಥಾನ ಪ್ರತ್ಯೇಕತಾವಾದಿ ಸೆರೆ | ಪಂಜಾಬ್ ಪೊಲೀಸರ ವಶಕ್ಕೆ ಒಪ್ಪಿಸಿದ ಸಿಸಿಬಿ

Jalandar sing 600 400 13 JAN 20
Published on

ಬೆಂಗಳೂರು: ಸಿಖ್ ಸಮುದಾಯಕ್ಕೆ ಪ್ರತ್ಯೇಕ ರಾಜ್ಯ ಕಲ್ಪಿಸುವಂತೆ ಒತ್ತಾಯಿಸಿ ಹೋರಾಟ ನಡೆಸಿದ ಪರಿಣಾಮ ಪಂಜಾಬ್​ನಲ್ಲಿನ ಗಲಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಖಲಿಸ್ತಾನ ಪ್ರತ್ಯೇಕತಾವಾದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆಹಳ್ಳಿಯಲ್ಲಿ ವಾಸವಿದ್ದ ಪ್ರತ್ಯೇಕತಾವಾದಿ ಜಲಂದರ್ ಸಿಂಗ್ ಸಿದ್ದು ಬಂಧಿತ. ಪಂಜಾಬ್ ವಿಶೇಷ ಕಾರ್ಯಾಚರಣೆ ಪಡೆಯ ವಶಕ್ಕೆ ಆತನನ್ನು ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಜಲಂದರ್ ಸಿಂಗ್ ಕಳೆದ 6 ತಿಂಗಳಿಂದ ಸಂಪಿಗೆಹಳ್ಳಿ ಬಳಿ ಪಿಜಿಯೊಂದರಲ್ಲಿ ವಾಸವಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಪ್ರತ್ಯೇಕ ರಾಜ್ಯಕ್ಕಾಗಿ ಪಂಜಾಬ್​ನಲ್ಲಿ ಹೋರಾಟ ನಡೆಸಿ ಗಲಭೆ ಸೃಷ್ಟಿಸಲು ಕಾರಣನಾಗಿದ್ದ. ಈ ಕುರಿತು ಮೊಹಾಲಿ ಪೊಲೀಸರು 2019ರ ಫೆಬ್ರವರಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಆತ ಪಂಜಾಬ್​ನಿಂದ ತಲೆಮರೆಸಿಕೊಂಡಿದ್ದ.

ಆತನ ಪತ್ತೆಗಾಗಿ ಪಂಜಾಬ್​ನ ವಿಶೇಷ ಕಾರ್ಯಾಚರಣೆ ಪಡೆ ತನಿಖೆ ಕೈಗೊಂಡಿತ್ತು. ನಗರದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಆಧರಿಸಿ ಆತನ ಬಂಧನಕ್ಕೆ ನಗರ ಪೊಲೀಸರ ನೆರವು ಕೋರಿದ್ದರು ಎಂದು ಡಿಸಿಪಿ ರವಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net