

ವಿಜಯವಾಣಿ ಸುದ್ದಿಜಾಲ ಕೆಜಿಎಫ್
ರಕ್ಷಣೆ ಒದಗಿಸುವ ಸಲುವಾಗಿ 100 ಎಕರೆ ವಿಶಾಲ ಪ್ರದೇಶದಲ್ಲಿ ಪೊಲೀಸ್ ತರಬೇತಿ ಶಾಲೆಯನ್ನು ಕೆಜಿಎಫ್ನಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ನಗರಸಭಾ ಮೈದಾನದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸಾವಿರ ಎಕರೆ ಜಾಗವಿರುವ ಕೆಜಿಎಫ್ನಲ್ಲಿ ಕೈಗಾರಿಕೆಗಳು ಸ್ಥಾಪನೆಯಾದಲ್ಲಿ ನೂರಾರು ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ. ಕೆಜಿಎಫ್ ಗಡಿ ಭಾಗದಲ್ಲಿರುವುದರಿಂದ ಜಾಗತಿಕ ಉದ್ದಿಮೆದಾರರು ಲಭ್ಯವಿರುವ ಪೊಲೀಸ್ ರಕ್ಷಣಾ ಕ್ರಮಗಳ ಬಗ್ಗೆ ಗಮನ ಹರಿಸುವುದರಿಂದ ರಕ್ಷಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದರು.
ಶೈಕ್ಷಣಿಕ ಕ್ಷೇತ್ರಕ್ಕೆ 55 ಕೋಟಿ ರೂ.ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ, ತಾಲೂಕಿನ ಗುಟ್ಟಹಳ್ಳಿ, ಸುಂದರಪಾಳ್ಯ ಮೊದಲಾದ ಕಡೆಗಳಲ್ಲಿ ಶಾಲಾ&ಕಾಲೇಜುಗಳ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ ನಗರದಲ್ಲಿ 2 ರಿಂದ 3 ಸಾವಿರ ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ವ್ಯಾಸಂಗ ಮಾಡಲು ಅನುವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಅನುದಾನ ಬಿಡುಗಡೆ ಮಾಡಿಸಿರುವ ಫಲವಾಗಿ ತಾಲೂಕಿನಾದ್ಯಂತ ಗುಣಮಟ್ಟ ಡಾಂಬರು ರಸ್ತೆಗಳನ್ನು ನಿಮಾರ್ಣ ಮಾಡಲು ಸಾಧ್ಯವಾಗಿದೆ. ಇದಲ್ಲದೇ ಕ್ಷೇತ್ರದಾದ್ಯಂತ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ರಕ್ಷಣಾ ಕ್ಷೇತ್ರ, ಕೃಷಿ, ಬಾಹ್ಯಾಕಾಶ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಮುಂದುವರೆದಿದ್ದರೂ ಇಂದಿಗೂ ಕೆಲವು ಕಡೆಗಳಲ್ಲಿ ಸಾಮಾಜಿಕ ಅಸಮಾನತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜೀವಂತವಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯಾವುದೇ ಒಂದು ರಾಷ್ಟ್ರದ ಪ್ರಗತಿ ಕೇವಲ ಒಬ್ಬ ವ್ಯಕ್ತಿಯಿಂದಾಗಲೀ, ಅಧಿಕಾರಿಗಳಿಂದಾಗಲೀ ಸಾಧ್ಯವಿಲ್ಲ, ಜನಸಾಮಾನ್ಯರು ಒಟ್ಟಾಗಿ ಕೈಜೋಡಿಸಿದಲ್ಲಿ ಸಾಂಘಿಕವಾಗಿ ಸಹಕಾರ ನೀಡಿದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸಲು ಹಾಗೂ ಇತರ ರಾಷ್ಟ್ರಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ. ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ನಿರ್ವಹಿಸಲಾಗುವುದು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾತನಾಡಿ, 140 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಕಂಡಿದ್ದೇವೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ನಾಗರಿಕರ ಸಹಕಾರ ಅಗತ್ಯವಾಗಿದ್ದು, ದೇಶವನ್ನು ಮತ್ತಷ್ಟು ಮುಂದೆ ಕೊಂಡೊಯ್ಯಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.