ಖಾಕಿ ಸೇವೆ ಜನಸ್ನೇಹಿ ಆಗಿರಲಿ

AML BHETI 3
Published on

ಐಮಂಗಲ: ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ (ತರಬೇತಿ) ಅಲೋಕ್‌ಕುಮಾರ್ ಪೊಲೀಸರಿಗೆ ಕಿವಿಮಾತು ಹೇಳಿದರು.

ಗ್ರಾಮದ ಪೊಲೀಸ್ ತರಬೇತಿ ಶಾಲೆಗೆ ಬುಧವಾರ ಭೇಟಿ ನೀಡಿದ್ದ ಸಂದರ್ಭ ಗೌರವವಂಧನೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ದೈಹಿಕ, ಮಾನಸಿಕವಾಗಿ ಸದೃಢತೆ ಹೊಂದಿರಬೇಕು. ಮುಂದಿನ ದಿನಗಳಲ್ಲಿ ನಾನು ಈ ತರಬೇತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಟ್ಟೆ ರಹಿತ, ಗಟ್ಟಿಮುಟ್ಟು ದೇಹ ಹೊಂದಿರಬೇಕು ಎಂದು ಸೂಚಿಸಿದರು.

ಇಲ್ಲಿನ ವಾತಾವರಣ ತರಬೇತಿಗೆ ಉತ್ತಮವಾಗಿದ್ದು, ಸುಸಜ್ಜಿತ ಕಟ್ಟಡ ವ್ಯವಸ್ಥೆ ಇದೆ. ತರಬೇತಿ ಶಾಲೆ ಹಸಿರೀಕರಣದಿಂದ ಕೂಡಿದ್ದು ಇನ್ನು ಹೆಚ್ಚು ಸಸಿ ನೆಟ್ಟು ಪೋಷಿಸುವ ಕೆಲಸ ಆಘಬೇಕು. ಹೆದ್ದಾರಿಯಿಂದ ತರಬೇತಿ ಶಾಲೆಗೆ ಬರುವ ರಸ್ತೆಯನ್ನು ಅಭಿವೃದ್ಧಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ತರಬೇತಿ ಶಾಲೆಯ ಸಭಾಂಗಣ, ದಾಖಲಾತಿ ಸಂಗ್ರಹ, ಒಳಾಂಗಣ ಕ್ರೀಡಾಂಗಣ, ವ್ಯಾಯಾಮ ಶಾಲೆ, ಶಸ್ತ್ರಾಗಾರ, ಗ್ರಂಥಾಲಯವನ್ನು ವೀಕ್ಷಿಸಿದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಕಲಬುರ್ಗಿಯ ಪೊಲೀಸ್ ತರಬೇತಿ ಶಾಲೆಯಲ್ಲಿ ಇದೇ ರೀತಿ ಲೈಬ್ರರಿ ತೆರೆಯಲಾಗಿದ್ದು, ಇದು ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲಕರವಾಗಲಿದೆ ಎಂದು ಹೇಳಿದರು.

ಡ್ರೋಣ್ ತರಬೇತಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅವಶ್ಯಕವಾಗಿದ್ದು, ಪುನರ್ ಮನನ ತರಬೇತಿಯಲ್ಲಿ ಸೇವಾನಿರತ ಸಿಬ್ಬಂದಿಗೆ ಡ್ರೋಣ್ ಮತ್ತು ಅತ್ಯಾಧುನಿಕ ಮಾಹಿತಿಗಳ ಬಗ್ಗೆ ತರಬೇತಿ ಕೊಡಿಸುವಂತೆ ಸಲಹೆ ನೀಡಿದರು.

ತರಬೇತಿ ಶಾಲೆಗೆ ಭೇಟಿ ನೀಡಿದ ನೆನಪಿಗಾಗಿ ಸಸಿ ನೆಟ್ಟು ನೀರೆರೆದರು. ಡಿವೈಎಸ್ಪಿ ಎಚ್.ಎಂ.ಡಿ.ಸರ್ದಾರ್ ನೇತೃತ್ವದಲ್ಲಿ ಗೌರವವಂಧನೆ ಸಲ್ಲಿಸಲಾಯಿತು. ಸಿ.ಪಾಂಡುರಂಗ ತಂಡದಿಂದ ವಾದ್ಯ ನುಡಿಸಲಾಯಿತು.

ಪ್ರಾಚಾರ್ಯ ಹಾಗೂ ಎಸ್ಪಿ ಪಿ.ಪಾಪಣ್ಣ, ಸಿಪಿಐಗಳಾದ ಬಿ.ಜಿ.ಶಂಕ್ರಪ್ಪ, ಟಿ.ಆರ್.ರಾಘವೇಂದ್ರ, ಎ.ಕೃಷ್ಣನಾಯ್ಕ, ಆರ್‌ಪಿಐ ಬಿ.ಪರಶುರಾಮ್, ಪಿಎಸ್‌ಐ ಡಿ.ಜಿ.ಪರಮೇಶ್, ಆರ್‌ಎಸ್‌ಐ ಮಂಜುನಾಥ್, ಸಹಾಯಕ ಆಡಳಿತಾಧಿಕಾರಿ ಟಿ.ಎಸ್.ಮೂರ್ತಿ, ಶಾಖಾ ಅಧೀಕ್ಷಕರು ನಾಗರಾಜ್, ನಾಗರಿಕ ಬಂದೂಕು ತರಬೇತಿ ಸಂಸ್ಥೆಯ ಶಂಕ್ರಣ್ಣ, ಸುರೇಶ್, ಇಸ್ರೋ ವಿಜ್ಞಾನಿ ವಿ.ಕೆ.ಬಸವರಾಜ್, ಸ್ಥಳೀಯ ವೈದ್ಯಾಧಿಕಾರಿ ಡಾ.ಸಿ.ವಿಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net