

ಕೊರಟಗೆರೆ: ರಾಜ್ಯ ಮೀಸಲು ಪೊಲೀಸ್ನ 12ನೇ ಪಡೆ ರಾಜ್ಯದಲ್ಲಿಯೇ ದೈಹಿಕ ಆರೋಗ್ಯ ಸದೃಢತೆಯಲ್ಲಿ ಮುಂಚೂಣಿಯಲ್ಲಿದ್ದು, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ತಿಳಿಸಿದರು.
ತಾಲೂಕಿನ ತುಂಬುಗಾನಹಳ್ಳಿಯ 12ನೇ ಕೆಎಸ್ಆರ್ಪಿ ಕವಾಯತು ಮೈದಾನದಲ್ಲಿ ಶುಕ್ರವಾರ ರಾಜ್ಯ ಪೊಲೀಸ್ ಇಲಾಖೆಯ 50ನೇ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆ ಸಮಾಜದಲ್ಲಿ ವಿಶಿಷ್ಟ ಗೌರವ ಪಡೆದಿದೆ. ದೇಶದಲ್ಲಿ ಯೋಧರಿಗೆ ಮತ್ತು ಪೊಲೀಸರಿಗೆ ಪದಕ ನೀಡಲಾಗುತ್ತದೆ. ನಮ್ಮ ಪಡೆಯಲ್ಲಿ ಡಾ.ಭಾಗೀರಥಿ ಕನ್ನಡತಿ ಇವರಿಂದ ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ ನೀಡಿ ಪೊಲೀಸರಲ್ಲಿ ಮಾನಸಿಕ ಧೈರ್ಯ ತುಂಬಲಾಗಿದೆ. ನಮ್ಮ ಮೀಸಲು ಪಡೆಯ 2 ಕಂಪನಿಗಳ 180 ಪೊಲೀಸರು ಕರ್ನಾಟಕ ಸೇರಿ ತಮಿಳುನಾಡು, ಕೇರಳ, ತೆಲಂಗಾಣ, ಬಿಹಾರ, ಹರಿಯಾಣಗಳಲ್ಲಿ ನಡೆದ ಚುನಾವಣೆವೇಳೆ ಸೇವೆ ಸಲ್ಲಿಸಿವೆ ಎಂದರು.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮಹಮ್ಮದ್ ರಫೀಕ್ ಪಾಷಾ ಮಾತನಾಡಿ, ಕೆಎಸ್ಆರ್ಪಿ ಪಡೆ ಸಮಸ್ತ ಕರ್ನಾಟಕದ ಶಾಂತಿಗೆ, ರಾಷ್ಟ್ರೀಯ ಭಾವೈಕ್ಯತೆಗೆ ಭದ್ರ ಬುನಾದಿಯಾಗಿವೆ. ಪೊಲೀಸ್ ಇಲಾಖೆಯ ಕೆಲಸ ಶ್ರೇಷ್ಠವಾಗಿದ್ದು, ತ್ಯಾಗ ಮತ್ತು ಬಲಿದಾನದ ಪ್ರತಿಕಗಳಲ್ಲಿ ಸೇರಿಕೊಂಡಿದೆ ಎಂದರು.
ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಕರ್ತವ್ಯದ ವೇಳೆ ಯಾವುದೇ ನಿಗದಿತ ಸಮಯ ಇರುವುದಿಲ್ಲ. ಆದ್ದರಿಂದ ಪೊಲೀಸರು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಯೋಗದೊಂದಿಗೆ ಇತರ ಹವ್ಯಾಸಗಳಾದ ಕಲಿಕೆ ಯಾವುದಾದರೂ ಒಂದನ್ನು ಕರ್ತವ್ಯ ನಂತರದ ಬಿಡುವಿನ ವೇಳೆಯಲ್ಲಿ ಮಾಡಿಕೊಂಡರೆ ಮಾನಸಿಕ ಸಮತೋಲನ ಹೊಂದಬಹುದು. ಪೊಲೀಸರು ಕುಟುಂಬದ ಕಡೆ ಗಮನಹರಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಕಡೆಯೂ ಗಮನ ಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಮೀಸಲು ಪಡೆಯ ಪಥ ಸಂಚಲನ ನಡೆಸಲಾಯಿತು. ಹಲವು ಪೊಲೀಸರಿಗೆ ಪದಕ ಪ್ರದಾನ ಮಾಡಿ, ಪ್ರಶಂಸನಾ ಪತ್ರ ನೀಡಲಾಯಿತು. ಕೆಎಸ್ಆರ್ಪಿ ಪಡೆಯ ಸಹಾಯಕ ಕಮಾಂಡೆಂಟ್ ಡಾ.ನವೀನ್ಕುಮಾರ್, ಡೆಪ್ಯುಟಿ ಕಮಾಂಡೆಂಟ್ ನಿಸ್ಸಾರ್ ಅಹಮ್ಮದ್ ಇದ್ದರು.