

ಬೆಂ. ಗ್ರಾಮಾಂತರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ವಿಧಾನಸೌಧದ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಆಯಾ ತಾಲೂಕುಗಳಲ್ಲಿ ತಡೆಯೊಡ್ಡಿದ ಗ್ರಾಮಾಂತರ ಜಿಲ್ಲಾ ಪೊಲೀಸರು, ಸುಮಾರು 5 ತಾಸು ಆಯಾ ವ್ಯಾಪ್ತಿಯ ಠಾಣಾ ಆವರಣದಲ್ಲಿ ಕೂಡಿ ಹಾಕಿದರು.
ರಾಜ್ಯ ಸರ್ಕಾರ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಆಶಾಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜಿಲ್ಲೆಯ ನಾಲ್ಕೂ ತಾಲೂಕಿನ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬೆಂಗಳೂರಿಗೆ ತೆರಳಲು ಬಸ್ ಹತ್ತಲು ಮುಂದಾದಾಗ ತಡೆಯೊಡ್ಡಿದ ಪೊಲೀಸರು ಎಲ್ಲರನ್ನು ಕರೆತಂದು ಠಾಣೆ ಆವರಣದಲ್ಲಿ ನಾಲ್ಕೈದು ತಾಸು ಕೂಡಿಹಾಕಿದ್ದರು. ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತೆಯರು, ಸರ್ಕಾರ ಪೊಲೀಸರ ಮೂಲಕ ಹಕ್ಕು ಕಸಿಯುವ ಪ್ರಯತ್ನ ನಡೆಸಿದೆ. ಕರೊನಾ ವಾರಿಯರ್ ಎಂದು ಮೂಗಿಗೆ ತುಪ್ಪ ಬಳಿದು ಈಗ ನಮ್ಮ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿದೆ ಎಂದು ಆಶಾಕಾರ್ಯಕರ್ತೆಯರು ದೂರಿದರು.
ಜಿಲ್ಲೆಯ ವಿವಿಧೆಡೆ ನಾಕಾ ಬಂಧಿ ಹಾಕಿದ್ದ ಪೊಲೀಸರು ಬೆಂಗಳೂರಿಗೆ ತೆರಳುತ್ತಿದ್ದ ಎಲ್ಲ ಕಾರ್ಯಕರ್ತೆಯರಿಗೆ ತಡೆಯೊಡ್ಡಿದ್ದಾರೆ ಎನ್ನಲಾಗಿದೆ.
ಖಾಲಿ ಪೇಪರ್‌ಗೆ ಸಹಿ: ಆಶಾ ಕಾರ್ಯಕರ್ತೆಯರನ್ನು ಠಾಣೆ ಆವರಣದಲ್ಲಿ ಕೂರಿಸಿದ ಪೊಲೀಸರು ಖಾಲಿ ಪೇಪರ್ ಮೇಲೆ ಸಹಿ ಪಡೆದರು ಎನ್ನಲಾಗಿದ್ದು, ಹೆಸರು ಮೊಬೈಲ್ ಸಂಖ್ಯೆ ದಾಖಲಿಸಿಕೊಂಡು ಮನವಿಯನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ ಎಂದು ಆಶಾಕಾರ್ಯಕರ್ತೆಯರು ತಿಳಿಸಿದ್ದಾರೆ.
ತಾಸುಗಟ್ಟಲೆ ಕಾದ ಮಹಿಳೆಯರು: ನಾಲ್ಕು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ತೆರಳಲು ಜಮಾವಣೆಯಾದ ಆಶಾ ಕಾರ್ಯಕರ್ತೆಯರನ್ನು ಠಾಣೆ ಬಳಿ ಕರೆದೊಯ್ದ ಪೊಲೀಸರು ಮಧ್ಯಾಹ್ನ 2 ಗಂಟೆವರೆಗೆ ಅಲ್ಲೇ ಕೂರಿಸಿದ್ದಾರೆ.
ಸರ್ಕಾರದ ಆದೇಶ ಪಾಲನೆ: ಕರೊನಾ ಹಿನ್ನೆಲೆಯಲ್ಲಿ ಜನಸಂದಣಿ ಏರ್ಪಡಬಾರದೆಂಬ ಉದ್ದೇಶದಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಶಾ ಕಾರ್ಯಕರ್ತೆಯರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶ ಪಾಲಿಸಲಾಗಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳವಾರ ರಾತ್ರಿಯೇ ಜಿಲ್ಲೆಯಲ್ಲಿರುವ ಒಟ್ಟು ಆಶಾ ಕಾರ್ಯಕರ್ತೆಯರು ಎಷ್ಟು, ಎಲ್ಲಿಂದ ಹೊರಡುತ್ತಾರೆ ಎಂಬ ಮಾಹಿತಿ ಕಲೆಹಾಕಿದ್ದ ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆಗಿಳಿದಿದ್ದರು ಎನ್ನಲಾಗಿದೆ. ಆಟೋ, ಬಸ್ ಹಾಗೂ ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದವರಿಗೆ ಖಾಕಿ ಪಡೆ ಬ್ರೇಕ್ ಹಾಕಿದೆ ಎಂದು ತಿಳಿದುಬಂದಿದೆ.
ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಹೊರಟಿದ್ದ ಆಶಾ ಕಾರ್ಯಕರ್ತೆಯರನ್ನು ಪೊಲೀಸರ ಮೂಲಕ ತಡೆದಿದ್ದರಿಂದ ತೀವ್ರ ಅಸಮಾಧಾನವಾಗಿದೆ. ಇಂಥ ಕ್ರಮಗಳಿಂದ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಲಕ್ಷ್ಮೀದೇವಿ, ಎಯುಟಿಯುಸಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷೆ ಬೆಂಗಳೂರಿನಲ್ಲಿ ನಡೆದ ಆಶಾಕಾರ್ಯಕರ್ತೆರ ಪ್ರತಿಭಟನೆಯಲ್ಲಿ ಇತರ ಜಿಲ್ಲೆಗಳ ಆಶಾಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಆಶಾ ಕಾರ್ಯಕರ್ತೆಯರನ್ನು ತಡೆಯಲಾಗಿದೆ. ಸರ್ಕಾರದ ಕ್ರಮಕ್ಕೆ ಬೇಸರ ಮೂಡಿದೆ. ಭವ್ಯಾ, ಎಯುಟಿಯುಸಿ ತಾಲೂಕು ಉಪಾಧ್ಯಕ್ಷೆ ಮುಂಜಾಗ್ರತಾ ಕ್ರಮವಾಗಿ ಇಲಾಖೆ ಕ್ರಮಕೈಗೊಂಡಿದೆ. ಆಶಾ ಕಾರ್ಯಕರ್ತೆಯರ ಮನವೊಲಿಸಿ, ತಹಸೀಲ್ದಾರ್ ಮೂಲಕ ಆಶಾಕಾರ್ಯಕರ್ತೆಯರ ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿಗೆ ತಲುಪಿಸಲಾಗಿದೆ. ಆಶಾ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿಯೇ ಈ ಕ್ರಮಕೈಗೊಳ್ಳಲಾಗಿದೆ. ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ