ಖಜ್ಜಿಡೋಣಿ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಣೆ

Khajjidoni Government School Centenary Celebration
ಖಜ್ಜಿಡೋಣಿಯ ಸರ್ಕಾರಿ ಪ್ರಾಥಮಿಕ ಶಾಲೆ
Published on

ಕಲಾದಗಿ : ಶತಮಾನದ ಹಿಂದೆ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಜ್ಜಿಡೋಣಿಯ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿ 140 ವರ್ಷವಾದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಲು ನಿಶ್ಚಯಿಸಲಾಗಿದೆ ಎಂದು ಶಿಕ್ಷಕ ಈರಯ್ಯ ಹಿರೇಮಠ ಹೇಳಿದರು.

ಈ ಬಗ್ಗೆ ‘ಪತ್ರಿಕೆ’ಯೊಂದಿಗೆ ಮಾತನಾಡಿದ ಅವರು, ಏ.25 ಹಾಗೂ 26ರಂದು ಶತಮಾನೋತ್ಸವ ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಶಾಲೆ ಕಟ್ಟಡ ಜೀರ್ಣೊದ್ಧಾರಕ್ಕೆ ಹಾಗೂ ಅಭಿವೃದ್ಧಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ನೀಡಿರುವ ದೇಣಿಗೆ ಅಂದಾಜು 14.5 ಲಕ್ಷ ರೂ. ಸಂಗ್ರಹಗೊಂಡಿದ್ದು, ಅದರಲ್ಲಿ ಬಹುಮಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ, ಭದ್ರಾ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳಲ್ಲಿ ಹಿರಿಯ ಅಭಿಯಂತರಾಗಿ ಸೇವೆ ಸಲ್ಲಿಸಿದ ಶಾಲೆಯ ಹಳೇ ವಿದ್ಯಾರ್ಥಿ ಅಶೋಕ ವಾಸನದ ಅವರು 3 ಶಾಲಾ ಕೊಠಡಿಗಳ ಜೀರ್ಣೊದ್ಧಾರಕ್ಕೆ ಅಂದಾಜು 7.50 ಲಕ್ಷ ರೂ. ಹಾಗೂ ಆಸ್ಟ್ರೇಲಿಯಾದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜು ಹುಣಸಿಕಟ್ಟಿ ಅವರು ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದರು.

ಶಾಲೆಯನ್ನು ಸುಸ್ಥಿತಿಗೊಳಿಸುವುದರ ಜತೆಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಆಧುನಿಕ ವ್ಯವಸ್ಥೆಗಳನ್ನು ನಿರ್ಮಿಸುವ ಕೆಲಸವಾಗುತ್ತಿದೆ. ಶಾಲೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net