

ವಿಜಯವಾಣಿ ಸುದ್ದಿಜಾಲ ಧಾರವಾಡ
ಖಾದಿ ಎಂಬುದು ನಮ್ಮ ಜೀವನ ವಿಧಾನ. ನಮ್ಮ ಪರಂಪರೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಬಸವಪ್ರಭು ಹೊಸಕೇರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಕೆ.ಎಸ್. ದೇಶಪಾಂಡೆ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಖಾದಿ ನಿನ್ನೆ-ಇಂದು-ನಾಳೆ ಕುರಿತು ಅವರು ಮಾತನಾಡಿದರು.
ಖಾದಿ ಬಟ್ಟೆ ನಮ್ಮ ದೈನಂದಿನ ಜೀವನ ವಿಧಾನದಲ್ಲಿ ಆರೋಗ್ಯಕರ ಹಾಗೂ ಪರಿಸರ ಸ್ನೇಹಿಯಾಗಿದೆ. ಖಾದಿ ಕೇವಲ ಬಟ್ಟೆ ಮಾತ್ರವಲ್ಲ. ದೇಶದ ದೊಡ್ಡ ಶಕ್ತಿ. ಆಧುನಿಕತೆಗೆ ತಕ್ಕಂತೆ ಇತ್ತೀಚೆಗೆ ರೇಶ್ಮೆ ಖಾದಿ, ಉಣ್ಣೆ ಖಾದಿಗಳು ಜನಪ್ರಿಯವಾಗಿವೆ. ಖಾದಿ ಒಂದು ಆರ್ಥಿಕ ಆಯಾಮವಾಗಿದ್ದು, ಸಂಪೂರ್ಣ ಮಾನವ ನಿರ್ಮಿತವಾದುದು ಮಾತ್ರವಲ್ಲ. ಸರಳ ಜೀವನ ಹಾಗೂ ಸಮಾನಭಾವದ ಸಂಕೇತವೂ ಹೌದು ಎಂದರು.
ಭಾರತದಲ್ಲಿ ಕೃಷಿ ನಂತರ ಹೆಚ್ಚು ಜನರಿಗೆ ಜೀವನಾಧಾರ ಉದ್ಯೋಗವಾಗಿದೆ. ಖಾದಿ ಬಟ್ಟೆಯ ಮೂಲ ಬೆಲೆಯನ್ನು ಸರ್ಕಾರವೇ ನಿರ್ಧರಿಸುತ್ತದೆ. 1974ರಲ್ಲಿ ಭಾರತದ ರಾಷ್ಟ್ರಧ್ವಜ ತಯಾರಿಕಾ ಘಟಕವನ್ನು ತಾಲೂಕಿನ ಗರಗ ಗ್ರಾಮದಲ್ಲಿ ಆರಂಭಿಸಲಾಯಿತು. 80ರ ದಶಕದಲ್ಲಿ ಈ ಗರಗ ಸೇವಾ ಕ್ಷೇತ್ರೀಯ ವಾರ್ಷಿಕ ಉತ್ಪನ್ನ 5 ಕೋಟಿ ರೂ. ಆಗಿದ್ದು ದಾಖಲೆಯಾಗಿದೆ. ಪ್ರತಿಯೊಬ್ಬರು ಇಂದು ಖಾದಿ ಬಟ್ಟೆ ಹಾಗೂ ಉತ್ಪನ್ನ ಖರೀದಿಸಿ ಬಡ ಕುಶಲಕರ್ಮಿಗಳ ನೇಕಾರರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ನಿರುದ್ಯೋಗಿಗಳಿಗೆ ವರ್ಷವಿಡಿ ಉದ್ಯೋಗವನ್ನು ಖಾದಿ ಒದಗಿಸುತ್ತದೆ. ಖಾದಿ ಭಾರತದ ಸ್ವಾತಂತ್ರ್ಯ ಹೋರಾಟದ ಸ್ವಾಭಿಮಾನದ ಸಂಕೇತ. ಇತ್ತೀಚಿನ 30 ವರ್ಷಗಳಲ್ಲಿ ಹತ್ತಿ ಬೆಳೆಯುವ ರೈತರ ಸ್ಥಿತಿ ಚಿಂತಾಜನಕವಾಗಿ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ವಿಷಾದನೀಯ ಎಂದರು.
ಸತೀಶ ತುರಮರಿ, ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ಶ್ರೀನಿವಾಸ ವಾಡಪ್ಪಿ, ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ, ಸರಸ್ವತಿ ಪೂಜಾರ, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.