

ವಿಜಯಪುರ : ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಖಾದಿಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಟ್ಟಿದ್ದಾರೆ. ಖಾದಿ ಬಟ್ಟೆಗಳನ್ನು ನಾವೂ ಬಳಸುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಖಾದಿ ವಸ್ತುಗಳ ಪ್ರದರ್ಶನ ಹಾಗೂ ಖಾದಿ ಉತ್ಸವ ಕ್ಕೆ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ಉತ್ಪನ್ನಗಳ ಪಾತ್ರ ಬಹಳ ದೊಡ್ಡದಿದೆ. ನಾವೆಲ್ಲ ಖಾದಿಯ ಉತ್ಪನ್ನಗಳನ್ನು ಬಳಸುವ ಮೂಲಕ ಅವುಗಳನ್ನು ಉಳಿಸಿ -ಬೆಳೆಸುವ ನಿಟ್ಟಿನಲ್ಲಿ ನಾವೂ ಸಹಾಯ ಮಾಡಬೇಕು. ಇದರಿಂದ ದೇಶದ ಆರ್ಥಿಕ ಪರಸ್ಥಿತಿ ಸುಧಾರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಖಾದಿ ನಮ್ಮ ದೇಶದ ಗುರುತು ಹಾಗೂ ಸಂಸ್ಕೃತಿಯ ಪ್ರತೀಕ, ಗಾಂಧೀಜಿ ಅವರು ನಡೆಸಿದ ಅನೇಕ ಚಳವಳಿಗಳಲ್ಲಿ ಖಾದಿಯೂ ಒಂದಾಗಿದೆ. ಖಾದಿ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಬಹುದು ಎಂಬ ಕಾರಣಕ್ಕಾಗಿ ಖಾದಿ ನೇಯಲು ಗಾಂಧೀಜಿ ಒತ್ತು ನೀಡಿದರು. ಈ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಲು ಅಸವನ್ನಾಗಿಸಿದರು. ಖಾದಿ ನೈಸರ್ಗಿಕ ವಸ್ತು ಬಳಸಿ ನಿರ್ಮಿಸುವುದರಿಂದ ಜನರ ಶಕ್ತಿ, ಪರಿಶ್ರಮ ಆಧರಿಸಿದ್ದರಿಂದ ಖಾದಿಗೆ ವಿಶೇಷ ಒತ್ತು ನೀಡಿದ್ದರು ಎಂದರು.
ಖಾದಿ ಬೇಸಿಗೆಯಲ್ಲಿ ತಂಪಾಗಿರುತ್ತದೆ. ಚಳಿಗಾಲದಲ್ಲಿ ಉಷ್ಣತೆ ನೀಡುತ್ತದೆ. ಆರೋಗ್ಯಕ್ಕೆ ಅನುಕೂಲ ಆಗುತ್ತದೆ ಎಂದರು. ರಾಷ್ಟ್ರ ಧ್ವಜವನ್ನು ಖಾದಿಯಿಂದ ಮಾತ್ರ ತಯಾರಿಸಲಾಗುತ್ತದೆ. ಖಾದಿ ಉತ್ಪನ್ನಗಳ ಅಭಿವೃದ್ಧಿ ಗೆ ಕೇಂದ್ರ, ರಾಜ್ಯ ಸರ್ಕಾರ ಆದ್ಯತೆ, ರಿಯಾಯಿತಿ ನೀಡಲಾಗುತ್ತಿದೆ. ಖಾದಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು, ಖಾದಿ ಮಂಡಳಿ ಅಧಿಕಾರಿ ಸಾವಿತ್ರಮ್ಮ ದಳವಾಯಿ ಸೇರಿದಂತೆ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗಮನ ಸೆಳೆದ ವಸ್ತು ಪ್ರದರ್ಶನ
ರಂಗಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಮೊದಲ ದಿನವೇ ಖರೀದಿ ಜೋರಾಗಿತ್ತು. ಗ್ರಾಹಕರು ತಮಗೆ ಬೇಕಾದ ಖಾದಿ ಬಟ್ಟೆಗಳನ್ನು ಖರೀದಿಸುವ ಮೂಲಕ ಖುಷಿ ವ್ಯಕ್ತಪಡಿಸಿದರು. ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ರಾಮನಗರ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಂದ ವಿವಿಧ ರೀತಿಯ ಖಾದಿ ಬಟ್ಟೆಗಳನ್ನು ತಂದಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು. ಹತ್ತಿಯಿಂದ ಮಾಡಿದ ಅಂಗಿ, ಕೈ ಚೀಲ, ಕರವಸ್ತ್ರ, ಸೀರೆ ಎಲ್ಲರ ಗಮನ ಸೆಳೆದವು. ಸ್ವದೇಶಿ ವಸ್ತುಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದು ವಿಶೇಷವಾಗಿತ್ತು.