ಕೊಳ್ಳೇಗಾಲ: ಪಟ್ಟಣದ ಈಶ್ವರನ ದೇವಸ್ಥಾನ ಹತ್ತಿವಿರುವ ಮನೆಯೊಂದರ ಬಾಗಿಲು ಮುರಿದ ಕಳ್ಳರು ಚಿನ್ನಾಭರಣ, ನಗದು ಹಾಗೂ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಪಟ್ಟಣದ ಬಿ.ಎನ್.ಜಗದೀಶ್ ಮತ್ತು ವಿಜಯಲಕ್ಷ್ಮೀ ದಂಪತಿ ಮನೆಯಲ್ಲಿ ಕಳ್ಳತನ ನಡೆದಿದ್ದು, 42 ಗ್ರಾಂ ಚಿನ್ನಾಭರಣ, 1.25 ಲಕ್ಷ ರೂ. ನಗದು ಹಾಗೂ 1 ಮೊಬೈಲ್ ಕದ್ದೊಯ್ದಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಜು.4 ರಂದು ಬೆಳಗ್ಗೆ 10 ಗಂಟೆಯಲ್ಲಿ ಮನೆಯ ಬೀಗ ಹಾಕಿಕೊಂಡು ಔಷಧ ತರಲೆಂದು ಮೈಸೂರಿಗೆ ತೆರಳಿದ್ದರು. ನಂತರ, ರಾತ್ರಿ 8.30 ರಲ್ಲಿ ಕೊಳ್ಳೇಗಾಲಕ್ಕೆ ಹಿಂದಿರುಗಿ ಮನೆಯ ಬಾಗಿಲ ಬೀಗ ತೆರೆಯಲು ಮುಂದಾದಾಗ ಬೀಗ ತೆಗೆಯಲು ಸಾಧ್ಯವಾಗಿಲ್ಲ. ಮತ್ತೆ ಹಲವು ಭಾರಿ ಪ್ರಯತ್ನಿಸಿ ಮನೆ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದಾಗ ರೂಮ್‌ನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಈ ವೇಳೆ ಪರಿಶೀಲಿಸಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಹಾರ, 10 ಗ್ರಾಂ. ತೂಕದ ಹುರಿ ಚೈನ್, 2 ಗ್ರಾಂ ಚಿನ್ನದ ಡಾಲರ್, 1.25 ಲಕ್ಷ ರೂ. ನಗದು ಹಣ ಸೇರಿದಂತೆ 1 ಮೊಬೈಲ್ ಕಳವು ಆಗಿರುವುದು ತಿಳಿದು ಬಂದಿದೆ. ಮನೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.