

ಮಂಗಳೂರು: ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರ ಕಾರನ್ನು ಬುಧವಾರ ಹಿಂಬಾಲಿಸಿಕೊಂಡು ಬಂದ ಆಪಾದನೆಯಡಿ ಉರ್ವ ನಿವಾಸಿ ಅನೀಶ್ ಪೂಜಾರಿ(28) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತ ದುರುದ್ದೇಶದಿಂದ ಹಿಂಬಾಲಿಸಿಲ್ಲ ಎನ್ನುವುದು ಗೊತ್ತಾಗಿ ಬಿಟ್ಟು ಕಳುಹಿಸಿದ್ದಾರೆ.
ಅನೀಶ್ ವಿರುದ್ಧ ಕಳ್ಳತನ, ದರೋಡೆ, ಗಾಂಜಾ ಸೇವನೆ ಮತ್ತಿತರ ಹಲವು ಕೇಸ್‌ಗಳಿದ್ದು, ಪ್ರಸ್ತುತ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು ಎಂದು ಕಾಂಗ್ರೆೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಐವನ್ ಡಿಸೋಜ ಸಹಿತ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಖಾದರ್ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ದೇರಳಕಟ್ಟೆಯಿಂದ ಯುವಕನೋರ್ವ ಅವರ ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ವೇಗವಾಗಿ ಬಂದಿದ್ದ. ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಸಂಚಾರಿ ನಿಯಮ ಉಲ್ಲಂಘಿಸಿದ್ದ. ಈ ಸಂದರ್ಭ ಎಸ್ಕಾರ್ಟ್ ಎಎಸ್‌ಐ ಸುಧೀರ್ ಸಂಶಯದ ಮೇಲೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಅಲ್ಲಿಂದ ಹೈವೇ ಪ್ಯಾಟ್ರೊಲಿಂಗ್‌ನವರಿಗೆ ಮಾಹಿತಿ ಬಂದಿತ್ತು. ಬಳಿಕ ಪಂಪ್‌ವೆಲ್‌ನಿಂದ ಖಾದರ್ ಕಾರಿನ ಎದುರು ಹೈವೇ ಪ್ಯಾಟ್ರೊಲ್ ವಾಹನ ಭದ್ರತೆ ನೀಡಿದೆ. ಯುವಕನನ್ನು ನಂತೂರಿನಲ್ಲಿ ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡು ಬಂದ ರಸ್ತೆಯಲ್ಲೇ ಪರಾರಿಯಾಗಿದ್ದ. ಬೈಕ್ ನೋಂದಣಿ ಸಂಖ್ಯೆ ಆಧಾರದಲ್ಲಿ ಯುವಕನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ರಾತ್ರಿಯೇ ವಶಕ್ಕೆ ಪಡೆದಿದ್ದರು.
ವಿಚಾರಣೆ ನಡೆಸಿದಾಗ ಆತ ದೇರಳಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಉರ್ವದಲ್ಲಿರುವ ಮನೆಗೆ ಬರುತ್ತಿದ್ದ. ಖಾದರ್ ಕಾರು ಎದುರಿನಲ್ಲಿ ಹೋಗುತ್ತಿದ್ದಾಗ ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಅದರ ಹಿಂಬದಿ ವೇಗವಾಗಿ ಆತನೂ ಬಂದಿದ್ದ. ಆತನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ, ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಕಾಂಗ್ರೆಸ್ ಸದಸ್ಯೆ ಪುತ್ರ: ಅನೀಶ್ ಮಹಿಳಾ ಕಾಂಗ್ರೆೆಸ್‌ನ ಬೋಳೂರು ವಾರ್ಡ್‌ನ ಕಾರ್ಯಕರ್ತೆಯೊಬ್ಬರ ಮಗ. ಆತ ಯಾವುದೇ ದುರುದ್ದೇಶದಿಂದ ಹಿಂಬಾಲಿಸಿಲ್ಲ ಎನ್ನುವುದು ಗೊತ್ತಾದ ಬಳಿಕ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ನಿಗದಿ ಮಾಡಿದ್ದ ಪ್ರತಿಭಟನೆಯನ್ನು ಕೈ ಬಿಟ್ಟಿತು.