

ವಿಜಯವಾಣಿ ಸುದ್ದಿಜಾಲ ಗದಗ
ಸಹಕಾರಿ ಧುರೀಣ ಕೆ.ಎಚ್. ಪಾಟೀಲರು ರೈತರ ಏಳ್ಗೆಗೆ ತಮ್ಮ ಜೀವಿತಾವಧಿಯಲ್ಲಿ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶನಿವಾರ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ವಿದ್ಯಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಅವರ ಜನ್ಮಶತಮಾನೋತ್ಸವ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೆ.ಎಚ್. ಪಾಟೀಲರು ನಿಷ್ಠುರ ರಾಜಕಾರಣಿ. ರಾಜಕೀಯ ಜೀವನದಲ್ಲಿ ನಿಜ ಹೇಳಿ ದ್ವೇಷ ಕಟ್ಟಿಕೊಳ್ಳುತ್ತಿದ್ದರು ವಿನಹ ಸುಳ್ಳು ಹೇಳುತ್ತಿರಲಿಲ್ಲ. ರಾಜಕಾರಣಿಗಳಿಗೆ ಸುಳ್ಳೆ ಬಂಡವಾಳ. ಆದರೆ ಕೆ.ಎಚ್. ಪಾಟೀಲ ಅದಕ್ಕೆ ವ್ಯತಿರಿಕ್ತರಾಗಿದ್ದರು. ಅವರ ನೇರ ನುಡಿಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಎಲ್ಲ ಜಿಲ್ಲೆಗಳಲ್ಲಿ ಅವರ ಜೀವನ, ಸಾಧನೆ, ರಾಜಕಾರಣ ಕುರಿತಾದ ಕಿರು ಹೊತ್ತಿಗೆಯನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಕೆ.ಎಚ್. ಪಾಟೀಲರು ನೇರ ನುಡಿಯ ನಿಷ್ಠುರ ರಾಜಕಾರಣಿಯಾಗಿದ್ದರು. ಆದರೆ ಎಚ್. ಕೆ. ಪಾಟೀಲರು ಸೌಮ್ಯ ಸ್ವಭಾವದವರು. ಸೌಮ್ಯವಾಗಿಯೇ ಕೆ.ಎಚ್. ಪಾಟೀಲರಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಎಚ್.ಕೆ. ಪಾಟೀಲ ಮಾಡಿದ್ದಾರೆ. ಆದರೆ, ಕೆ.ಎಚ್. ಪಾಟೀಲ ಅವರ ಗತ್ತು ಎಚ್.ಕೆ. ಪಾಟೀಲ ಅವರಿಗೆ ಬರಲಿಲ್ಲ. ಆದರೆ, ಮೃದುವಾಗಿಯೇ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ಕೆ.ಎಚ್. ಪಾಟೀಲ ಅವರ ಕಾರ್ಯವನ್ನು ಡಿ.ಆರ್. ಪಾಟೀಲ, ಎಚ್.ಕೆ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರ ಜೀವನ ಸಾಧನೆ, ರಾಜಕಾರಣವನ್ನು ವರ್ಷರ್ಪೂತಿ ಯುವಕರಿಗೆ ತಿಳಿಸುವ ಕೆಲಸವನ್ನು ಜನ್ಮಶತಮಾನೋತ್ಸವದ ಮೂಲಕ ನಡೆಯಲಿ ಎಂದರು.
ತುಮಕೂರು ಸಂಸದ ಜಿ.ಎಸ್. ಬಸವರಾಜ ಮಾತನಾಡಿ, ನಾನು ಸಂಸದನಾಗಲು ಕಾರಣ ಕೆ.ಎಚ್. ಪಾಟೀಲರು. 22 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಲು ಮಾರ್ಗದರ್ಶನ ಮಾಡಿದರು. ಅವರ ವ್ಯಕ್ತಿತ್ವವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಬದುಕು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ನಾಡು ಕಂಡ ಧೀಮಂತ ರಾಜಕಾರಣಿ ದಿ. ಕೆ.ಎಚ್. ಪಾಟೀಲ ಅವರ ಜನ್ಮಶತಮಾನೋತ್ಸವವನ್ನು ವರ್ಷರ್ಪೂತಿ ಆಚರಣೆ ಮಾಡಲಾಗುವುದು. ಆ ಮೂಲಕ ಕೆ.ಎಚ್. ಪಾಟೀಲ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರ ಚಿಂತನೆಯನ್ನು ಪ್ರತಿ ಭಾನುವಾರ ಅನುಷ್ಠಾನ ಆಗುವ ಹಾಗೆ ವರ್ಷರ್ಪೂತಿ ಮಾಡಲಾಗುವುದು. ಅವರ ಚಿಂತನೆಗಳನ್ನು ಕಾರ್ಯ ರೂಪಕ್ಕೆ ತರಲು ರಚನಾತ್ಮಕ ಕಾರ್ಯಕರ್ತರ ಪಡೆ ಸಿದ್ಧಗೊಳಿಸಲಾಗುವುದು. ಕಾರ್ಯಪಡೆಯು ಅವರ ಕನಸು ನನಸು ಮಾಡಲು ಶ್ರಮಿಸಲಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸೆಂಟರ್ ಗೆ ಸಂಸದ ಜಿ.ಎಸ್. ಬಸವರಾಜ ಚಾಲನೆ ನೀಡಿದರು. "ಜನಮೆಚ್ಚಿದ ನಾಯಕ' ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಶಾಸಕ ಶ್ರೀನಿವಾಸ ಮಾನೆ, ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕ ಬಿ.ಆರ್.ಯಾವಗಲ್, ಜಿ. ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಬಿ.ಬಿ. ಅಸೂಟಿ, ಮಿಥುನ್ ಪಾಟೀಲ, ಅಕ್ಬರ್ ಸಾಬ ಬಬಚಿರ್, ಎಲ್.ಡಿ. ಚಂದಾವರಿ ಇತರರು ಉಪಸ್ಥಿತರಿದ್ದರು.