

ಕೊಳ್ಳೇಗಾಲ : ಬಿ-ಖಾತೆ ವಿತರಣೆ ಸಂಬಂಧ ಕಂದಾಯ ಪಾವತಿಯಲ್ಲಿ ನಗರಸಭೆ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಕಚೇರಿ ಮುಂಭಾಗ ಬುಧವಾರ ಸ್ವಯಂ ಉದ್ಯೋಗದ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಪ್ರತಿಭಟಿಸಿದರು.
ಸಂಘದ ಅಧ್ಯಕ್ಷ ಆಗಸ್ಟಿನ್ ಮಾತನಾಡಿ, ಬಿ-ಖಾತೆ ಪಡೆಯಲು ಸಾರ್ವಜನಿಕರು ನಗರಸಭೆಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಕಂದಾಯ ಕಟ್ಟಿಸಿಕೊಳ್ಳುವ ವಿಚಾರದಲ್ಲಿ ನಗರಸಭೆ ಆಯುಕ್ತ ರಮೇಶ್ ಹಾಗೂ ಕಂದಾಯ ಅಧಿಕಾರಿ ಸಾರ್ವಜನಿಕರಲ್ಲಿ ಗೊಂದಲ ಏರ್ಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆಯುಕ್ತರು ಬಿ-ಖಾತೆಗಾಗಿ ಅರ್ಜಿದಾರರು 2024-25 ನೇ ಸಾಲಿನಲ್ಲಿ ಡಬಲ್ ಟ್ಯಾಕ್ಸ್ ಕಟ್ಟಬೇಕು. ಹಿಂದಿನ ಐದು ವರ್ಷಗಳಿಗೆ ಸಿಂಗಲ್ ಟ್ಯಾಕ್ಸ್ ಕಟ್ಟಬೇಕು ಎಂದು ನಮಗೆ ಮಾಹಿತಿ ನೀಡಿದ್ದರು. ಆದರೆ, ಕಂದಾಯ ಅಧಿಕಾರಿಗಳು ಸಾರ್ವಜನಿಕರಿಗೆ 5 ವರ್ಷ ಡಬಲ್ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ಇದ್ದರಿಂದ ಬಹಳ ಸಮಸ್ಯೆ ಉಂಟಾಗಿದೆ. ಅರ್ಜಿ ಸಲ್ಲಿಸಿ ಜನರು ಅಲೆಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಆದೇಶದಂತೆ ಕಂದಾಯ ಕಟ್ಟಿಸಿಕೊಳ್ಳಲ್ಲಿ ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
2 ದಿನಗಳ ಗಡವು ಪಡೆದ ಆಯುಕ್ತರು: ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಎ.ರಮೇಶ್ ಮಾತನಾಡಿ, ಇಲ್ಲಿಯವರೆಗೆ ಸಾರ್ವಜನಿಕರಿಂದ 250 ಅರ್ಜಿಗಳು ಬಂದಿದೆ. 2024-25 ನೇ ಸಾಲಿಗೆ ಡಬಲ್ ಟ್ಯಾಕ್ಸ್ ಹಾಗೂ ಅದರಿಂದಿನ 5 ವರ್ಷಗಳಿಗೆ ಸಿಂಗಲ್ ಟ್ಯಾಕ್ಸ್ ಕಟ್ಟಸಿಕೊಂಡು ಖಾತೆ ವಿತರಣೆ ಮುಂದಾಗಿದ್ದೆವು. ಅದರಂತೆ ಕೆಲವರಿಗೆ ಖಾತೆಯನ್ನು ನೀಡಲಾಗಿದೆ. ಆದರೆ, ಈ ನಡುವೆ ಕಂದಾಯ ಕಟ್ಟಿಸಿ ಕೊಳ್ಳುವ ವಿಚಾರದಲ್ಲಿ ಬೇರೆ ಬೇರೆ ಸ್ಥಳೀಯ ಸಂಸ್ಥೆಗಳಲ್ಲಿ ಸಮಸ್ಯೆ ಉಂಟಾಗಿದೆ. ಗೆಜೆಟ್ ನೋಟಿಫಿಕೇಶನ್‌ನಲ್ಲಿ ಗೊಂದಲವಿದೆ. ಆದ್ದರಿಂದ ಸ್ಪಷ್ಟ ನಿರ್ದೇಶನಕ್ಕೆ ಕಾಯುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ದಿ ಯೋಜನೆ ಅಧಿಕಾ ರಿಗಳ ಗಮನಕ್ಕೂ ತಂದಿದ್ದೇವೆ. ಕಂದಾಯ ವಸೂಲಾತಿಯಲ್ಲಿ ಸ್ಪಷ್ಟ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಅದರಂತೆ ಮಾಹಿತಿ ಪಡೆದು ಇನ್ನೆರಡು ದಿನದ ಬಳಿಕ ಖಾತೆ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಗೊಂದಲ ನಡುವೆ ಖಾತೆ ಏಕೆ ವಿತರಿಸಿದ್ದೀರಿ: ಕಂದಾಯ ಪಾವತಿ ವಿಚಾರದಲ್ಲಿ ಗೊಂದಲವಿದ್ದರೂ ಖಾತೆ ಯಾಕೆ ವಿತರಣೆ ಮಾಡಿದ್ದೀರಿ ಬಿಜೆಪಿ ಕೊಳ್ಳೇಗಾಲ ಟೌನ್ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪಾಜಿ ಪ್ರಶ್ನಿಸಿದರು. ಮೊದಲ ಅರ್ಜಿ ನೀಡಿದವರಿಗೆ ಖಾತೆ ನೀಡಿಲ್ಲ ಎಂದು ದೂರಿದರು. ಪೌರಾಯುಕ್ತ ರಮೇಶ್ ಪ್ರತಿಕ್ರಿಯಿಸಿ, 55 ರಿಂದ 60 ಖಾತೆಗಳನ್ನು ವಿತರಣೆ ಮಾಡಲಾಗಿದೆ. ಸ್ವಲ್ಪ ಗೊಂದಲವಿದ್ದ ಕಾರಣ ನಿಲ್ಲಿಸಲಾಗಿದೆ ಎಂದರು. ಸ್ಥಳದಲ್ಲಿದ್ದ ನಗರಸಭೆ ಸದಸ್ಯರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಕೊಳ್ಳೇಗಾಲ ಟೌನ್ ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಸ್ವಯಂ ಉದ್ಯೋಗದ ಕ್ಷೇಮಾಭಿವೃದ್ಧಿ ಸಂಘದ ವಾಸಿಮ್, ಸುರೇಶ್, ನಗರಸಭೆ ಮಾಜಿ ನಾಮ ನಿರ್ದೇಶನ ಸದಸ್ಯ ಮಧುಚಂದ್ರ, ಸೋಮಣ್ಣ, ನಂಜುಂಡ, ರಾಜಶೇಖರ್, ಆನಂದ್, ವಿಶ್ವ ಇತರರು ಇದ್ದರು.