ಕೊಳ್ಳೇಗಾಲ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಲಾಯಿತು. ಈ ವೇಳೆ ಬಿ.ಆರ್. ಮಹೇಶ್ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳ ಜನ, ಜಾನುವಾರುಗಳ ರಕ್ಷಣೆಗೆ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ, ಕಾವೇರಿ ತೀರದಲ್ಲಿರುವ ತಗ್ಗು ಪ್ರದೇಶಗಳಿಂದ ಕೆಲ ಗ್ರಾಮಗಳ ಜಮೀನುಗಳನ್ನು ನೀರು ಆವರಿಸಿದೆ. ಸದ್ಯ ಜನರು ಆತಂಕ ಪಡುವ ಅಗತ್ಯವಿಲ್ಲ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಗಳಿಂದ ನೀರು ಬಿಟ್ಟರೆ ಯಾವುದೇ ಸಮಯದಲ್ಲದರೂ ನದಿ ಪಾತ್ರ ಗ್ರಾಮಗಳ ಜನ ವಸತಿ ಸ್ಥಳಕ್ಕೆ ಜಲ ನುಗ್ಗಬಹುದು. ಆದ್ದರಿಂದ ಇಲಾಖಾವಾರು ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಅಧಿಕಾರಿಗಳಿಗೆ ಎಸಿ ಮಹೇಶ್ ತಿಳಿಸಿದರು.