ವಿವಿಧ ಕಾಮಗಾರಿಗಳಿಗೆ ಚಾಲನೆ

18-kgl-1
Published on

ಕೊಳ್ಳೇಗಾಲ : ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 6.56 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ತಾಲೂಕಿನ ಚಿಲಕವಾಡಿ ಬೆಟ್ಟದ ಸಮೀಪವಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 4 ಕೋಟಿ ರೂ. ವೆಚ್ಚದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ, ಟಗರಪುರ ಮೋಳೆಯ ಭಗೀರಥ ಸಮುದಾಯ ಭವನದ ಮುಂದುವರಿದ ಕಾಮಗಾರಿ, ಟಗರಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ, ಅಂಬೇಡ್ಕರ್ ಸಮುದಾಯ ಭವನದ ಮುಂದುವರಿದ ಕಾಮಗಾರಿ, ಆದಿ ಜಾಂಬವ ಬೀದಿಯಲ್ಲಿ ರಸ್ತೆ ಕಾಮಗಾರಿ, ಆಲಹಳ್ಳಿ ಗ್ರಾಮದಲ್ಲಿ ಬಾಬು ಜಗಜೀವನರಾಮ್ ಸಮುದಾಯ ಭವನ ಮುಂದುವರಿದ ಕಾಮಗಾರಿ, 6 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿ ವೃದ್ಧಿ ಕಾಮಗಾರಿ ಸೇರಿದಂತೆ ಕಜ್ಜಿಹುಂಡಿ ಹಾಗೂ ಹೊಸ ಮಾಲಂಗಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಇದೇ ಸಂದರ್ಭ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಎ.ಆರ್. ಕೃಷ್ಣಮೂರ್ತಿ, 2025-26ನೇ ಸಾಲಿಗೆ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದೆ. ಕಳೆದ ವರ್ಷವೂ 25 ಕೋಟಿ ರೂ. ವಿಶೇಷ ಅನುದಾನವನ್ನು ಸರ್ಕಾರ ನೀಡಿತ್ತು ಎಂದರು. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶ್ರಮಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಡುವೆಯೂ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿದೆ. ಸಿಎಂ ಸಿದ್ದರಾ ಮಯ್ಯ ನುಡಿದಂತೆ ನಡೆದಿದ್ದಾರೆ. ವಿರೋಧ ಪಕ್ಷದ ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರವನ್ನು ಸರ್ಕಾರ ನೀಡುತ್ತಿದೆ ಎಂದರು.

ರಸ್ತೆ ವಿಸ್ತರಣೆ ಅನುದಾನ ಬಳಕೆ: ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಹಾಗೂ ರಸ್ತೆ, ನಗರ ಪ್ರದೇಶದ ರಸ್ತೆ ಅಭಿವೃದ್ಧಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಪಟ್ಟಣದ ಬಹು ನಿರೀಕ್ಷಿತ ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜ್ ಕುಮಾರ್ ರಸ್ತೆ ವಿಸ್ತರಣೆ ಮಾಡುತ್ತೇನೆಂದು ಈ ಹಿಂದೆ ಮಾತು ನೀಡಿದ್ದೆ. ಅದನ್ನು ಈಡೇರಿಸಿಕೊಳ್ಳಲು ಅನುದಾನ ಬಳಕೆ ಮಾಡಿಕೊಂಡು ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವೆ ಎಂದು ಶಾಸಕ ಕೃಷ್ಣಮೂರ್ತಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮೋಳೆ, ಜಿಲ್ಲಾ ಪಂಚಾಯಿತಿ ಉಪವಿಭಾಗದ ಎಇಇ ಕುಮಾರ್, ಇಂಜಿನಿಯರ್ ಮಂಜು, ಕೆ.ಆರ್.ಡಿ.ಐ.ಎಲ್. ಎಇಇ ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರದ ಪ್ರತಾಪ್, ಟಗರಪುರ ಗ್ರಾ.ಪಂ. ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ನಿಂಗರಾಜು, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವಣ್ಣ, ಮುಖಂಡ ಚೇ ತನ್, ದೊರೈರಾಜ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net