ಹಾವು ಕಚ್ಚಿ ಮೃತಪಟ್ಟ ಮಗುವಿನ ಪಾಲಕರಿಗೆ ಪರಿಹಾರ ನೀಡಿ

Snake venom
Published on

ಕೊಳ್ಳೇಗಾಲ : ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಮೃತಪಟ್ಟ ಎರಡು ವರ್ಷದ ಮಗುವಿಗೆ ಕುಂತೂರು ಸಕ್ಕರೆ ಕಾರ್ಖಾನೆ ವತಿಯಿಂದ 10ಲಕ್ಷ ರೂ. ಪರಿಹಾರ ನೀಡಬೇಕೆಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಪಳನಿಸ್ವಾಮಿ ಜಾಗೇರಿ ಒತ್ತಾಯಿಸಿದ್ದಾರೆ.

ಕುಂತೂರು ಸಕ್ಕರೆ ಕಾರ್ಖನೆ ಕಡೆಯಿಂದ ಕಬ್ಬು ಕಟಾವಿಗೆ ಹಲವು ಕಾರ್ಮಿಕರನ್ನು ಕರೆತರಲಾಗಿತ್ತು. ಇವರಲ್ಲಿ ವಿಜಯನಗರ ಜಿಲ್ಲೆಯ ಅಗರಿ ಬೊಮ್ಮನಹಳ್ಳಿ ತಾಲೂಕಿನ ಮಾರೇಬಾಳು ತಾಂಡದ ಶ್ರೀಧರ್ ಕುಟುಂಬ ಕಬ್ಬು ಕಟಾವು ಕೆಲಸಕ್ಕೆ ಬಂದಿತ್ತು. ಶ್ರೀಧರ್ ಮತ್ತು ಆತನ ಪತ್ನಿ ತೇರಂಬಳ್ಳಿ ಗ್ರಾಮದ ಜಮೀನೊಂದರಲ್ಲಿ ಕಬ್ಬು ಕಟಾವು ಕೆಲಸ ಮಾಡುತ್ತಿದ್ದರು. ಪಕ್ಕದಲ್ಲಿಯೇ ತಮ್ಮ ಮಗು ಅಜಯ್ನನ್ನು ಬೆಡ್‌ಶೀಟ್ ಹಾಸಿ ಮಲಗಿಸಿದ್ದರು. ಈ ವೇಳೆ ಹಾವು ಕಡಿದು ಮಗು ಮೃತಪಟ್ಟಿದೆ. ಹಾಗಾಗಿ, ಕುಂತೂರು ಸಕ್ಕರೆ ಕಾರ್ಕಾನೆ ಈ ಹೊಣೆ ಹೊತ್ತು ಮಗುವಿನ ಪಾಲಕರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಆ ಕುಟುಂಬದ ಸದಸ್ಯರಿಗೆ ತಮ್ಮ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಬ್ಬು ಕಟಾವು ಹಾಗೂ ಇನ್ನಿತರ ಕೆಲಸಕ್ಕೆ ಬರುವ ಕಾರ್ಮಿಕರು ಹಾಗೂ ಕುಟುಂಬಸ್ಥರಿಗೆ ನೆಲಸಲು ಮೂಲಸೌಕರ್ಯ ಕಲ್ಪಿಸಬೇಕು. ಬಾಣಂತಿ, ಗರ್ಭಿಣಿ ಮಹಿಳೆಯರು ಹಾಗೂ ಶಾಲೆಗೆ ಹೋಗುವ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net