ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಆದರ್ಶೋತ್ಸವ

12-kollegal-2,,,,,
Published on

 ಕೊಳ್ಳೇಗಾಲ : ಆದರ್ಶ ಶಾಲೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೇದಿಕೆಯಾಗಿದೆ. ಪಠ್ಯವಲ್ಲದೆ ಇಲ್ಲಿನ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯೆ ಪುಷ್ಪಲತಾ ಶಾಂತರಾಜು ಹೇಳಿದರು.

ಕೊಳ್ಳೇಗಾಲದ ಮುಡಿಗುಂಡ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಆದರ್ಶೋತ್ಸವ 2024-25 ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಯಾವುದೇ ಸೌಲಭ್ಯಗಳಿಲ್ಲದೆ ಆರಂಭಗೊಂಡ ಆದರ್ಶ ವಿದ್ಯಾಲಯ ಈ ಭಾಗದಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ನೀಡಿ ಹೆಮ್ಮರವಾಗಿ ಬೆಳೆದು ನಿಂತಿದೆ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಕಲೆ ಚಟುವಟಿಕೆಗಳಲ್ಲಿ ಕ್ರಿಯಾ ಶೀಲವಾಗಿ ಮಕ್ಕಳು ತೊಡಗಿಸಿಕೊಳ್ಳುತ್ತಿದ್ದಾರೆ. ಶಾಲೆಯು ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಫಲಿತಾಶದಲ್ಲಿ ಜಿಲ್ಲೆಯ ಗಮನ ಸೆಳೆದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಕಳೆದ 13 ವರ್ಷಗಳಿಂದ ಶೈಕ್ಷಣಿಕ ವಲಯದಲ್ಲಿ ಪ್ರಗತಿಯ ದಾಪುಗಾಲಿಟ್ಟಿದೆ. ಜಿಲ್ಲೆಯ 4 ಆದರ್ಶ ವಿದ್ಯಾಲಯಗಳಲ್ಲಿ ಈ ಶಾಲೆ ಅತ್ಯುತ್ತಮ ವೈಶಿಷ್ಟೃವನ್ನು ಹೊಂದಿದೆ. ಮಕ್ಕಳಲ್ಲಿರುವ ಅದಮ್ಯ ಚೇತನವನ್ನು ಗುರುತಿಸಿ ಶಿಕ್ಷಕರು ಪೋಷಿಸುವಲ್ಲಿ ಸವಾಲಿನಂತೆ ಕೆಲಸ ಮಾಡಬೇಕು. ಮಕ್ಕಳಲ್ಲಿನ ವಿಭಿನ್ನತೆಗೆ ಅನುಗುಣವಾಗಿ ಸಾಧಿಸುವ ಮನೋಭಾವ ರೂಪಿಸುವಂತೆ ಶಿಕ್ಷಕರು, ಪೋಷಕರ ಪರಿಶ್ರಮವಿರುತ್ತದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಆರ್.ಪ್ರಿಯದರ್ಶಿನಿ ಮಾತನಾಡಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುವುದು ಎಂಬ ಆಶಯದಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಲ್ಲಿನ ಕಲಿಕಾ ಗುಣವನ್ನು ಗಮನಿಸಿ ಶಿಕ್ಷಣ, ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಫಲಿತಾಂಶ ಹೊರತರುವಲ್ಲಿ ಮಕ್ಕಳನ್ನು ಪ್ರೇರೇಪಿಸಲಾಗುತ್ತಿದೆ ಎಂದರು.

ಈ ವೇಳೆ ರಾಷ್ಟ, ರಾಜ್ಯಮಟ್ಟ ಸೇರಿದಂತೆ ವಿವಿಧ ವಿಭಾಗದ ಕ್ರೀಡೆಗಳಲ್ಲಿ ವಿಜೇತರಾದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net