ಕೆಜಿಎಫ್ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನ ಬಿಡುಗಡೆ

KGF MLA
Published on

ಶಾಸಕಿ ರೂಪಕಲಾ ಹೇಳಿಕೆ, 9 ಕಿ.ಮೀ. ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಚಾಲನೆ

ಕೆಜಿಎಫ್: ಕ್ಷೇತ್ರ ಅಭಿವೃದ್ಧಿ ಕಂಡು ನಮ್ಮ ಊರಿಗೆ ಅಷ್ಟಲಕ್ಷ್ಮೀಯರು ಹೆಜ್ಜೆ ಹಾಕಿದಾಗ ಕಂಡು ಬರುವ ಸಂಭ್ರಮ ಕಾಣುತ್ತಿದೆ. ಕಳೆದ 20 ವರ್ಷದಿಂದ ಕೆಜಿಎಫ್ ನಗರವನ್ನು ನೋಡುತ್ತಿದ್ದೇನೆ. ಊರು ಕತ್ತಲೆಯ ಸ್ವಾಗತ ಕೋರುತ್ತಿತ್ತು. ನನ್ನ ಮನಸಿನಲ್ಲಿ ನಗರ ಬೆಳಗಿಸಬೇಕು ಎಂಬ ಆಲೋಚನೆ ಇತ್ತು, ಶಾಸಕಿಯಾಗಿ ಊರನ್ನು ಬೆಳಗಿಸುವ ಅವಕಾಶ ದೇವರು ಕಲ್ಪಿಸಿದ್ದಾನೆ ಎಂದು ಶಾಸಕಿ ರೂಪಕಲಾ ಹೇಳಿದರು.

ಬೆಮೆಲ್ ನಗರ ಸ್ವಾಗತ ಕಮಾನಿನಿಂದ ಪೈಲೈಟ್ಸ್, ಸೂರಜ್‌ಮಲ್ ವೃತ್ತ, ರಾಬರ್ಟ್‌ಸನ್‌ಪೇಟೆ ಸಾಲ್ಡನಾ ವೃತ್ತದಿಂದ ಆಂಡ್ರಸನ್‌ಪೇಟೆ ವರೆಗೆ ಹಾಗೂ ಕೊರಮಂಡಲ್‌ನಿಂದ ಗಾಂಧಿವೃತ್ತದ ವರೆಗೆ ಅಂದಾಜು 4.60 ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಮಧ್ಯೆ ಹಾಕಿರುವ ಹೈಮಾಸ್ಟ್ ವಿದ್ಯುತ್‌ದೀಪಗಳಿಗೆ ಸ್ವಿಚ್‌ಆನ್ ಮಾಡುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಕ್ಷೇತ್ರದ ಜನರ ಸೇವಕಳಾಗಿ ದುಡಿಯುತ್ತಿದ್ದೇನೆ. ಪ್ರಥಮ ಭಾರಿ ಶಾಸಕಿಯಾಗಿ ಆಯ್ಕೆಯಾದ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಆದರೆ ನಾನು ಕಾಂಗ್ರೆಸ್ ಶಾಸಕಿ ಆಗಿದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ.್ಲ 2ನೇ ಬಾರಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಕೇಳಿದಷ್ಟು ಅನುದಾನ ಬಿಡುಗಡೆಗೊಳಿಸುತ್ತಲೇ ಇದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ 9 ಕಿಮೀ ವರೆಗೆ ಹೈಮಾಸ್ಟ್ ದೀಪ ಅಳವಡಿಸಲು ಸಾಧ್ಯವಾಗಿರುವುದನ್ನು ಯಾರೂ ಮರೆಯಬಾರದು ಎಂದರು.

ನಗರದ ಸೂರಜ್‌ಮಲ್ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಶಾಸಕಿ ಡೋಳ್ಳು ಕುಣಿತ, ಬ್ಯಾಂಡ್ ಸೆಟ್‌ಗಳೊಂದಿಗೆ ಸಾಲ್ಡನಾ ವೃತ್ತದವರೆಗೂ ಕಾಲ್ನಡಿಗೆಯಲ್ಲಿ ಮೆರವಣಿಗೆ ಬಂದರು.

ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ ದಯಾಶಂಕರ್, ಉಪಾಧ್ಯಕ್ಷ ಜರ್ಮನ್, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮಾಜಿ ಉಪಾಧ್ಯಕ್ಷೆ ದೇವಿ ಗಣೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಾಲ್, ಸಂಪತ್ ಕುಮಾರ್, ನಗರಸಭೆ ಸದಸ್ಯರಾದ ಮಾಣಿಕ್ಯಂ, ಕರುಣಕರನ್, ಪ್ರವೀಣ್, ಶಾಲಿನಿ ನಂದಕುಮಾರ್, ಸುಕನ್ಯ ಸುರೇಶ್, ರಾಜೇಶ್ ನಧಿಯಾ, ಮಗಿ, ಪ್ರಭು, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ತಹಸೀಲ್ದಾರ್ ನಾಗವೇಣಿ, ಎಇಇ ಮಂಜುನಾಥ್ ಇದ್ದರು.

ಟೌನ್‌ಶಿಪ್‌ಗೆ ಶೀಘ್ರ ಭೂಮಿಪೂಜೆಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೊಗಲಾಡಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲಾಗಿದ್ದು, ಬೆಮೆಲ್ ಕಾರ್ಖಾನೆಗೆ ನೀಡಿದ್ದ ಜಮೀನು ಬಳಕೆ ಮಾಡದೆ ಖಾಲಿ ಬಿಟ್ಟಿದ್ದ 984 ಎ. ಪ್ರದೇಶವನ್ನು ಮರಳಿ ರಾಜ್ಯ ಸರ್ಕಾರ ಪಡೆದು ಕೈಗಾರಿಕೆ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಗೊಳಿಸಿದೆ. ಬೆಮೆಲ್ ವಸಂತನಗರದ ಬಳಿ 294 ಎ. ಜಮೀನಿನಲ್ಲಿ ಟೌನ್‌ಶಿಪ್ ಸಹ ನಿರ್ಮಾಣ ಮಾಡಲು ಸರ್ಕಾರ ಗ್ರೀನ್‌ಸಿಗ್ನಲ್ ನೀಡಿದ್ದು, ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಶೀಘ್ರ ಭೂಮಿಪೂಜೆ ನೆರೆವೆರಿಸಲಾಗುವುದು ಎಂದು ರೂಪಕಲಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net