

ಕೋಲಾರ: ಕೆಜಿಎಫ್ ನಗರಸಭೆಯಲ್ಲಿ ಪಾರುಪತ್ಯಕ್ಕೆ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕಿ ರೂಪಕಲಾ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ.
ಒಟ್ಟು 35 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 3, ಜೆಡಿಎಸ್ 2, ಆರ್‌ಪಿಐ 2, ಸಿಪಿಐಎಂ 1 ಹಾಗೂ ಪಕ್ಷೇತರ 14 ಸದಸ್ಯರು ಇದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಒಟ್ಟು 18 ಸದಸ್ಯರ ಬೆಂಬಲ ಬೇಕಾಗಿದೆ. ಶಾಸಕಿ ರೂಪಕಲಾ ಅವರಿಗೆ ಮತದಾನದ ಹಕ್ಕು ಇರುವುದರಿಂದ ಗೆದ್ದಿರುವ 13 ಸದಸ್ಯರಲ್ಲದೆ ಇನ್ನೂ 4 ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅವರ ಬೆಂಬಲಿಗರು ಕಸರತ್ತು ನಡೆಸಿದ್ದಾರೆ.
ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ತಕ್ಷಣವೇ ಪಕ್ಷೇತರರಾಗಿ ಗೆದ್ದಿರುವ ಕೆಲ ಬಂಡಾಯ ಕಾಂಗ್ರೆಸ್ಸಿಗರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಸಫಲರಾಗಿರುವ ಶಾಸಕಿ, ಸಂಸದರು ನಗರಸಭೆಯನ್ನು ವಶಕ್ಕೆ ಪಡೆಯಲು ಯತ್ನಿಸಿರುವ ಸುಳಿವು ಅರಿತು 18ಕ್ಕೂ ಹೆಚ್ಚು ಸದಸ್ಯರು ಬಿಜೆಪಿಯತ್ತ ವಾಲದಂತೆ ತಡೆಗೋಡೆಯಾಗಿ ನಿಂತಿದ್ದಾರೆ.
ಕನಿಷ್ಠ 25 ಸದಸ್ಯರನ್ನು ಒಗ್ಗೂಡಿಸಿ ನಗರಸಭೆಯ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ಲೆಕ್ಕಾಚಾರ ಹಾಕಿದ್ದಾರೆ. ಈ ಕಾರ್ಯ ಯಶಸ್ವಿಗಾಗಿ ಭಾನುವಾರ ಕೋಲಾರ-ಮುಳಬಾಗಿಲು ಮಾರ್ಗದ ಅಜ್ಜಪ್ಪನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಸದಸ್ಯರನ್ನು ಸೇರಿಸಿ, ಬಿಜೆಪಿಗೆ ಬೆಂಬಲ ನೀಡದಂತೆ ನೀತಿ ಪಾಠ ಹೇಳಲು ತಂತ್ರಗಾರಿಕೆ ರೂಪಿಸಿದ್ದಾರೆ.
ಬಿಜೆಪಿ 3 ಸ್ಥಾನಗಳನ್ನು ಹೊಂದಿದ್ದರೂ ಸಂಸದರು ನಗರಸಭೆಯನ್ನು ವಶಕ್ಕೆ ಪಡೆಯಲು ಕಳೆದ 2 ವಾರಗಳಿಂದ ಕೆಜಿಎಫ್‌ನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವುದರಿಂದ ಸ್ವಲ್ಪಮಟ್ಟಿಗೆ ಆತಂಕಗೊಂಡಿರುವ ಶಾಸಕಿ ಬಿಜೆಪಿ ಮಣಿಸಲು ಪಣತೊಟ್ಟಿದ್ದಾರಲ್ಲದೆ, ಸದಸ್ಯರು ತಪ್ಪಿಸಿಕೊಳ್ಳದಂತೆ ರೆಸಾರ್ಟ್ ರಾಜಕೀಯಕ್ಕೆ ಧುಮುಕಿದ್ದಾರೆ.
ಭಾನುವಾರ ಸಭೆ ಬಳಿಕ ನಂಬಿಕಸ್ಥ ಸದಸ್ಯರನ್ನು ಹೊರತುಪಡಿಸಿ 15ಕ್ಕೂ ಹೆಚ್ಚು ಸದಸ್ಯರನ್ನು ಯಾವುದಾದರೊಂದು ಸೂಕ್ತವಾದ ಪ್ರದೇಶಕ್ಕೆ ಕಳುಹಿಸಿ ಚುನಾವಣೆಗೆ ಮುನ್ನಾ ದಿನ ಕರೆಸಿಕೊಳ್ಳುವುದಕ್ಕೆ ಗೇಮ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಕುತೂಹಲ ಮೂಡಿಸಿದ ಸಂಸದರ ನಡೆ: ಬಿಜೆಪಿಗೆ ಅಧಿಕಾರ ಹಿಡಿಯಲು ಇನ್ನೂ 15 ಸದಸ್ಯರ ಬೆಂಬಲ ಬೇಕಾಗಿದೆ, ಸದ್ಯದ ಮಟ್ಟಿಗೆ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಅವಶ್ಯಕತೆ ಇರುವ ಸದಸ್ಯರ ಬೆಂಬಲವಿದೆ ಎನ್ನಲಾಗಿದ್ದು, ಸಂಸದ ಮುನಿಸ್ವಾಮಿ 15 ಸದಸ್ಯರನ್ನು ಎಲ್ಲಿಂದ ಸೆಳೆಯಬಹುದು ಎಂಬುದು ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ. ಜೆಡಿಎಸ್‌ನ ಇಬ್ಬರು ಸದಸ್ಯರು ಬೆಂಬಲ ನೀಡಿದರೂ ಬಿಜೆಪಿಗೆ ಬಹುಮತ ಪಡೆಯಲು 13 ಸದಸ್ಯರು ಬೇಕಾಗುತ್ತದೆ, ಪಕ್ಷೇತರರಲ್ಲಿ ಈಗಾಗಲೇ ಕೆಲವರು ಕಾಂಗ್ರೆಸ್ ಜತೆ ಹೋಗಿದ್ದಾರೆ, ಆರ್‌ಪಿಐ ಬೆಂಬಲ ಯಾರಿಗೆ ಎಂಬುದು ನಿರ್ಧಾರವಾಗಿಲ್ಲ. ಸಿಪಿಎಂ ಹಾಗೂ ಪಕ್ಷೇತರರಲ್ಲಿ ಮುಸ್ಲಿಂ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದು ಅನುಮಾನ, ಹೀಗಿದ್ದರೂ ಮುನಿಸ್ವಾಮಿ ಮ್ಯಾಜಿಕ್ ಮಾಡಲು ಯತ್ನಿಸುತ್ತಿರುವುದರಿಂದ ಸುರಕ್ಷತೆಗಾಗಿ ಶಾಸಕಿ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಜಿಎಫ್ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲು ನಿಗದಿಯಾಗಿರುವುದರಿಂದ ಸಂಸದರು ತಮ್ಮದೇ ರಾಜಕೀಯ ಲೆಕ್ಕಾಚಾರದೊಂದಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಮಾಜಿ ಶಾಸಕ ವೈ.ಸಂಪಂಗಿ ಪಾತ್ರ ಏನೆಂಬುದು ಇನ್ನೂ ನಿಗೂಢವಾಗಿದೆ.