ಕೆಜಿಎಫ್ ಬಸ್​ಗಳು, ಬಂಗಾರಪೇಟೆಗೆ ಡಿಪೋ

FotoJet 222
Published on

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ | 500 ಕೋಟಿ ವೆಚ್ಚದಲ್ಲಿ ಬಸ್​ ಖರೀದಿ

ಕೆಜಿಎಫ್​ :ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ನೂತನ ಕಟ್ಟಡಗಳು ಉದ್ಘಾಟನೆಗೊಂಡಿವೆ. ಬಾಕಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿರುವ ಹಂತಕ್ಕೆ ಬಂದಿದ್ದು, ಶೀಘ್ರ ಕಟ್ಟಡಗಳನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರ ಹೊರವಲಯದ ಬೆಮೆಲ್​ ಬಳಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣ ಮಾಡಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿ ಮಾತನಾಡಿದ ಅವರು, ವಾಹನ ಚಲಾಯಿಸುವುದನ್ನು ಪರಿಪೂರ್ಣ ಕಲಿತಿದ್ದಲ್ಲಿ ಮಾತ್ರ ಚಾಲನಾ ಪರೀೆಯಲ್ಲಿ ಉತ್ತೀರ್ಣರಾಗಲು ಸಾಧ್ಯ. ಪರಿಪೂರ್ಣವಾಗಿ ವಾಹನ ಚಲಾಯಿಸುವುದನ್ನು ಕಲಿತ ಬಳಿಕವಷ್ಟೇ ಟೆಸ್ಟ್​ಗೆ ಹಾಜರಾಗಬೇಕಿರುವುದರಿಂದ ಅಪಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲಿವೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥದಲ್ಲಿ ಚಾಲನಾ ಪರೀಕ್ಷೆ ಮಾಡುವುದರಿಂದ ಆರಂಭದಲ್ಲೇ ಚಾಲನೆ ಬರದಿರುವವರನ್ನು ಗುರುತಿಸಬಹುದು ಎಂದರು.

ಬಂಗಾರಪೇಟೆ ತಾಲೂಕಿನಲ್ಲಿ ನೂತನ ಕೆಎಸ್​ಆರ್​ಟಿಸಿ ಬಸ್​ ಡಿಪೋ ಮಂಜೂರು ಮಾಡುವಂತೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಬೇಡಿಕೆ ಇಟ್ಟಿದ್ದು, ಶ್ರೀ ಪ್ರಾರಂಭಿಸುವುದಾಗಿ ತಿಳಿಸಿದರು. ಅಲ್ಲದೇ ಕೆಎಸ್​ಆರ್​ಟಿಸಿ ಸಂಸ್ಥೆಯಿಂದ 900 ಬಸ್​ಗಳನ್ನು ಖರೀದಿಸಲಾಗುತ್ತಿದ್ದು, ಕೆಜಿಎಫ್​ ಡಿಪೋಗೆ ಬಸ್​ಗಳನ್ನು ಮಂಜೂರು ಮಾಡುವುದಾಗಿ ತಿಳಿಸಿದರು.

ಕೆಯುಐಡಿಎಫ್​ಸಿ ನಿಗಮದಿಂದ 380 ಕೋಟಿ ರೂ.ವೆಚ್ಚದಲ್ಲಿ ಎಲೆಕ್ಟ್ರಿಕ್​ ಬಸ್​ಗಳನ್ನು ಖರೀದಿಸಿದ್ದು, ಈಗ ಮತ್ತೆ 500 ಕೋಟಿ ರೂ. ವೆಚ್ಚದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ಖರೀದಿಗೆ ಸಾಲ ನೀಡಲು ಬಿಡುಗಡೆ ಮಾಡುವುದಾಗಿ ಅಧ್ಯಕ್ಷ ಎಸ್​.ಎನ್​.ನಾರಾಯಣಸ್ವಾಮಿ ತಿಳಿಸಿದ್ದಾರೆ ಎಂದರು.

ಶಾಸಕ, ಕೆಯುಐಡಿಎಫ್​ಸಿ ನಿಗಮ ಅಧ್ಯಕ್ಷ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿ, ರಾಮಯಾಣದಲ್ಲಿ ರಾಮಾಂಜನೇಯ ಯುದ್ಧ ನಡೆದಿಲ್ಲವೇ?, ಹಾಗೆಯೇ ನಮ್ಮಲ್ಲೂ ಭಿನ್ನಭಿಪ್ರಾಯ ಬಂದಿದ್ದು ನಿಜ. ಆದರೆ ಕಾಲ ಬದಲಾಗಿದ್ದು ಇನ್ನು ಮುಂದೆ ಕೋಲಾರದಲ್ಲಿ ಗುರುತಿಸಿಕೊಂಡಿರುವ ಘಟ್​ಬಂಧನ್​ ಆಟ ನಡೆಯುವುದಿಲ್ಲ. ಕೆ.ಎಚ್​ಚ್​.ಮುನಿಯಪ್ಪ ಹಿರಿಯ ರಾಜಕಾರಣಿಯಾಗಿದ್ದು ಅವರನ್ನು ಸೋಲಿಸಲು ಯಾರಿಂದಲ್ಲೂ ಸಾಧ್ಯವಿಲ್ಲ. ಮುನಿಯಪ್ಪ ಅವರು ಮತ್ತೆ ಕೋಲಾರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಮಲಿಂಗಾರೆಡ್ಡಿ ಅವರು ಬರಬೇಕೆಂದು ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಕೆಜಿಎಫ್​ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗಿಶ್​, ಅಪರ ಸಾರಿಗೆ ಅಧಿಕಾರಿ ಉಮಾ ಶಂಕರ್​, ಜಿಲ್ಲಾಧಿಕಾರಿ ಡಾ. ಎಂ.ಆರ್​.ರವಿ, ಜಿಪಂ ಸಿಇಒ ಪ್ರವಿಣ್​ ಬಾಗೇವಾಡಿ, ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​, ತಹಸೀಲ್ದಾರ್​ ಭರತ್​, ಇಒ ವೆಂಕಟೇಶಪ್ಪ, ಪೌರಾಯುಕ್ತ ಆಂಜನೇಯಲು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಜೇಂದ್ರ ಬಾಬು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ನಗರಸಭೆ ಸದಸ್ಯ ಮಾಣಿಕ್ಯಂ, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್​ ಇದ್ದರು.

ರೈಲ್ವೆ ಕಾಖಾನೆ ಪುನರಾರಂಭಕ್ಕೆ ಒತ್ತು : ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ವೀಲ್​ ಆ್ಯಂಡ್​ ಆಕ್ಸೆಲ್​ ಕಾರ್ಖಾನೆ ಸ್ಥಾಪಿಸಲು ಯತ್ನಿಸಿ, ಅನುದಾನವನ್ನೂ ಬಿಡುಗಡೆಗೊಳಿಸಲಾಗಿತ್ತು. ಆದರೆ ತದನಂತರ ಬಂದ ಸರ್ಕಾರಗಳು ಅದಕ್ಕೆ ಅವಕಾಶ ಕೊಡದೇ ಹೋಗಿದ್ದು, ದುರ್ದೈವ. ಒಂದು ವೇಳೆ ಅದು ಪ್ರಾರಂಭವಾಗಿದ್ದಲ್ಲಿ ಜಿಲ್ಲೆಗೆ ಬೃಹತ್​ ಉದ್ದಿಮೆಗಳು ಬರಲು ಅನುಕೂಲವಾಗುತ್ತಿತ್ತು. ಸಂಸದ ಮಲ್ಲೇಶ್​ಬಾಬು ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅರ್ಧಕ್ಕೆ ನಿಂತಿರುವ ಕಾರ್ಖಾನೆ ಪ್ರಾರಂಭಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್​.ಮುನಿಯಪ್ಪ ತಿಳಿಸಿದರು.

ಕ್ಷೇತ್ರದಲ್ಲಿ ಕೈಗಾರಿಕೆ ಕ್ರಾಂತಿ : ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುತ್ತಿದ್ದು, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆಗಾಗಿ ಹಾಗೂ ಇಂಟಿಗ್ರೇಟೆಡ್​ ಟೌನ್​ಶಿಪ್​ ನಿಮಾರ್ಣ ಮಾಡಲು ಅನುದಾನ ನೀಡುತ್ತಿದ್ದಾರೆ. ಕಳೆದ 50 ವರ್ಷಗಳ ಹಿಂದೆ ಬಿಇಎಂಎಲ್​ ಕಂಪನಿಗೆ ರಾಜ್ಯಸರ್ಕಾರ 2,000 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಬಿಇಎಂಎಲ್​ ಕಂಪನಿಯು 973 ಎಕರೆ ಜಮೀನು ಬಳಕೆ ಮಾಡಿಕೊಂಡಿರಲಿಲ್ಲ. ಬಳಕೆಯಾಗದೆ ಉಳಿದಿದ್ದ ಜಮೀನನ್ನು ಪತ್ತೆ ಹಚ್ಚಿ ಮರಳಿ ರಾಜ್ಯ ಸರ್ಕಾರದ ವಶಕ್ಕೆ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿಸಿ ಸಫಲವಾಗಿದ್ದರ ಫಲವಾಗಿ ಇದೀಗ ಜಮೀನು ಅಭಿವೃದ್ಧಿಪಡಿಸಲು ಕೆಐಎಡಿಬಿಐಗೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಮುಂದಿನ ಕೈಗಾರಿಕೆ ಕ್ರಾಂತಿಯಾಗಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಶಾಸಕಿ ರೂಪಕಲಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net