

ಕೆಜಿಎಫ್: ನಗರದ ಮಾರಿಕುಪ್ಪಂ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್‌ನಲ್ಲಿರುವ ಮನೆಯೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು ಅಂದಾಜು 276 ಕೆಜಿ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ.
ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿ ಜೋಸೆಫ್ ಮತ್ತು ಸೂರಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗ್ಗೆ 11ರಿಂದ ಕಾರ್ಯಾಚರಣೆ ಆರಂಭಿಸಿದ ರಾಬರ್ಟ್‌ಸನ್‌ಪೇಟೆ ವೃತ್ತ ನಿರೀಕ್ಷಕ ಸೂರ್ಯಪ್ರಕಾಶ್ ಮತ್ತು ತಂಡ ಮನೆಯನ್ನು ಪರಿಶೀಲನೆ ನಡೆಸಿದಾಗ ಗಾಂಜಾ ಮೂಟೆಗಳು ಪತ್ತೆಯಾಗಿದ್ದು, 8 ಬ್ಯಾಗ್‌ಗಳಲ್ಲಿ ತುಂಬಿಸಲಾಗಿದೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಮಹಜರು ನಡೆಸಿದರು.
ದಂಧೆಕೋರರು ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು ಎನ್ನಲಾಗುತ್ತಿದ್ದು, ಪೊಲೀಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ. ಕಳೆದ ಭಾನುವಾರವಷ್ಟೇ ರಾಬರ್ಟ್‌ಸನ್‌ಪೇಟೆ ಪೊಲೀಸರು ನಗರದ ಆಶ್ವತ್ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 220 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಈತ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ.
ಗಾಂಜಾ ಘಮಲು ಜೋರು: ಈಗಾಗಲೆ ಬೆಂಗಳೂರಿನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯ ಕರಾಳ ಮುಖ ದಿನದಿಂದ ದಿನಕ್ಕೆ ಬಯಲಾಗುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಗಡಿ ಭಾಗವಾಗಿರುವ ಕೆಜಿಎಫ್‌ನಲ್ಲೂ ಗಾಂಜಾ ಘಮಲು ಜೋರಾಗಿರುವುದಕ್ಕೆ ಈ ಪ್ರಮಾಣದ ಗಾಂಜಾ ಸಾಕ್ಷಿಯಾಗಿದೆ. ಈ ಭಾಗದಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರವಾಗಿ ಸರಬರಾಜು ಮಾಡಲಾಗುತ್ತಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.