ಕೆಜಿಬಿವಿ ಶಾಲೆ ಬಡ ಬಾಲಕಿಯರಿಗೆ ಆಸರೆ

KGBV school is a support for poor girls
ಬಾದಾಮಿ ಸಮೀಪದ ಯಂಕಂಚಿ-ಮಣಿನಾಗರ ಕೆಜಿಬಿವಿ ಶಾಲೆಗೆ ಮಕ್ಕಳ ದಾಖಲಾತಿಗೆ ಭಿತ್ತಿಚಿತ್ರಗಳನ್ನು ಉಪನಿರ್ದೇಶಕ ಬಿ.ಕೆ.ನಂದನೂರ ಬಿಡುಗಡೆಗೊಳಿಸಿದರು. ಉಪನಿರ್ದೇಶಕ ಕಚೇರಿ ವಿಜ್ಞಾನ ವಿಷಯ ಪರಿವೀಕ್ಷಕ ಎಸ್.ಎಸ್.ಹಾಲವರ, ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ ಇದ್ದಾರೆ.
Published on

ಬಾದಾಮಿ: ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ ಅನಾಥ, ಬಡತನ ರೇಖೆಗಿಂತ ಕೆಳಗಿರುವ, ಶಾಲೆಯಿಂದ ಹೊರಗುಳಿದ, ಶಾಲೆ ಬಿಟ್ಟ ಹಾಗೂ ಅಲ್ಪಸಂಖ್ಯಾತ ವರ್ಗದ ಬಾಲಕಿಯರಿಗೆ ಆಸರೆಯಾಗಿದೆ ಎಂದು ಶಾಲಾ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರ ಹೇಳಿದರು.

ತಾಲೂಕಿನ ಯಂಕಂಚಿ-ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ 2024-25 ನೇ ಸಾಲಿನ ದಾಖಲಾತಿಗೆ ಭಿತ್ತಿಚಿತ್ರ, ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೆಜಿಬಿವಿ ಶಾಲೆಯಲ್ಲಿ ದಾಖಲಾತಿಗಾಗಿ ಕಿಕ್ಕಿರಿದ ಜನಸ್ತೋಮವನ್ನು ಗಮನಿಸಿದ ಅವರು, ನಿಗದಿತ ಗುರಿ ಮೀರಿ ವಿದ್ಯಾರ್ಥಿಗಳ ದಾಖಲಾತಿ ಆಗಬಾರದು. ಯಾಕೆಂದರೆ ಅನಾಥ, ಬಡತನ ರೇಖೆಗಿಂತ ಕೆಳಗಿರುವ, ಶಾಲೆಯಿಂದ ಹೊರಗುಳಿದ, ಶಾಲೆ ಬಿಟ್ಟ ಬಾಲಕಿಯರಿಗೆ ಆಸರೆಯಾಗುವ ಏಕೈಕ ಶಾಲೆ ಇದಾಗಿದೆ. ಅರ್ಹ ಮಕ್ಕಳಿಗೆ ಮಾತ್ರ ಇಲ್ಲಿ ಪ್ರವೇಶ ನೀಡಿ ಅವರಿಗೆ ಉತ್ತಮ ಶಿಕ್ಷಣ ಒದಗಿಸುವ ಕಾರ್ಯವಾಗಬೇಕು ಎಂದರು.

ಪಠ್ಯ ಬೋಧನೆಯೊಂದಿಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಲು ಈಗಿಂದಲೇ ಅವರಲ್ಲಿ ಆತ್ಮವಿಶ್ವಾಸ ತುಂಬಿ. ಅವರು ಭಾವಿ ಭವಿಷ್ಯತ್ತಿನ ವಾರಸುದಾರರು ಆಗುವಂತೆ ಶ್ರಮವಹಿಸಿ. ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರಿಗೆ ಸಲಹೆ ನೀಡಿದ ಡಿಡಿಪಿಐ ನಂದನೂರ, ಸಮಸ್ಯೆಗಳಿದ್ದರೆ ಹೇಳಿ ಎಂದು ಮುಖ್ಯಶಿಕ್ಷಕಿ ಹಾಗೂ ಸಿಬ್ಬಂದಿಗೆ ಸೂಚಿಸಿದರು.

ಉಪನಿರ್ದೇಶಕ ಕಚೇರಿ ವಿಜ್ಞಾನ ವಿಷಯ ಪರಿವೀಕ್ಷಕ ಎಸ್.ಎಸ್.ಹಾಲವರ, ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ, ಶಾಲೆ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ಕರಪತ್ರ ಮತ್ತು ಭಿತ್ತಿಪತ್ರ ಬಿಡುಗಡೆಗೊಳಿಸಿದ ಡಿಡಿಪಿಐ, ಶಾಲೆಯ ವಾತಾವರಣ, ಮಕ್ಕಳ ಶಿಸ್ತು, ಶುಚಿ ರುಚಿಯಾದ ಊಟ, ವಿವಿಧ ಸೌಲಭ್ಯಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮವಸ್ತ್ರ ಧರಿಸಿದ್ದ ಮಕ್ಕಳೊಂದಿಗೆ ಸಂವಾದ ನಡೆಸಿದ ಡಿಡಿಪಿಐ, ಅವರಲ್ಲಿನ ಶಿಸ್ತು, ಆಚಾರ ವಿಚಾರ, ಶ್ರದ್ಧೆ, ಜಾಣತನ ನೋಡಿ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net