ಮತ್ತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ

KFD-Story
Published on

ಸಿದ್ದಾಪುರ/ಕಾರವಾರ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಉಪಟಳ ಶುರುವಾಗಿದೆ. ಸಿದ್ದಾಪುರ ತಾಲೂಕಿನ ನಿಪ್ಳಿ ಗ್ರಾಮದಲ್ಲಿ ಮೂವರಲ್ಲಿ ಕಾಯಿಲೆ ಇರುವುದು ಕಳೆದ ಎರಡು ದಿನದಲ್ಲಿ ಖಚಿತವಾಗಿದೆ. ಈ ವರ್ಷ ಹೊಸ ಪ್ರದೇಶಗಳಲ್ಲಿ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ನಿಪ್ಳಿ ಗ್ರಾಮದ 40 ವರ್ಷದ ಪುರುಷ ಹಾಗೂ 10 ವರ್ಷದ ಬಾಲಕನಿಗೆ ರೋಗ ಇರುವುದು ಬುಧವಾರ ಖಚಿತವಾಗಿತ್ತು. ಬಾಲಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 40 ವರ್ಷದ ಪುರುಷನೊಬ್ಬ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಗುರುವಾರ ರೋಗ ಖಚಿತವಾದ ಇನ್ನೊಬ್ಬ ಪುರುಷ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಆರೋಗ್ಯ ಇಲಾಖೆ ಕೆಎಫ್‌ಡಿ ನಿಯಂತ್ರಣ ಘಟಕದ ವಿಶೇಷ ಅಧಿಕಾರಿ ಡಾ.ಸತೀಶ ಶೇಟ್, ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಹಾಗೂ ಇತರ ಅಧಿಕಾರಿಗಳು ಗುರುವಾರ ನಿಪ್ಳಿ ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ ಈ ಭಾಗದ 10 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎರಡು ಉಣ್ಣೆಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಆ ಭಾಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಉಣ್ಣೆಗಳು ಕಡಿಯದಂತೆ ತಡೆಯಲು ಡೆಫ್ ತೈಲ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಎಂದು ಆರೋಗ್ಯಾಽಕಾರಿಗಳು ಮಾಹಿತಿ ನೀಡಿದ್ದಾರೆ. ತಾಲೂಕಿನ ಎಲ್ಲ ಗ್ರಾಪಂಗಳಿಗೂ ಕರಪತ್ರ ವಿತರಿಸಲಾಗುವುದು ಎಂದು ಸಿದ್ದಾಪುರ ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.
ಕಡಿಮೆಯಾಗಿದ್ದ ಕಾಯಿಲೆ:
ಜಾನುವಾರುಗಳು ಹಾಗೂ ಮಂಗಳಲ್ಲಿ ಬೆಳೆಯುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ)ಉಣ್ಣೆ(ಉಣುಗು)ಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಾಡಿನಂಚಿನಲ್ಲಿರುವ ಗ್ರಾಮಗಳಲ್ಲಿ ಈ ಕಾಯಿಲೆ ಜಾಸ್ತಿ. 2019 ರಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ 7 ತಾಲೂಕುಗಳಿಗೆ ರೋಗ ವ್ಯಾಪಿಸಿತ್ತು. ಸಿದ್ದಾಪುರ ತಾಲೂಕೊಂದರಲ್ಲೇ 6 ಸಾವು ಸಂಭವಿಸಿತ್ತು. ಬನವಾಸಿಯ ಕದಂಬೋತ್ಸವ ವೇದಿಕೆಯ ಸಮೀಪವೇ ಮಂಗವೊಂದು ಮೃತಪಟ್ಟಿತ್ತು. ಕೆಎಫ್‌ಡಿ ಆತಂಕದಲ್ಲಿ ಕದಂಬೋತ್ಸವ ರದ್ದು ಮಾಡಲಾಗಿತ್ತು. ನಂತರದ ವರ್ಷಗಳಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ಕಂಡುಬAದರೂ ಕೆಎಫ್‌ಡಿ ಅಷ್ಟು ವ್ಯಾಪಿಸಿರಲಿಲ್ಲ.
ಔಷಧವಿಲ್ಲ:
ಕೆಎಫ್‌ಡಿ ನಿಯಂತ್ರಣಕ್ಕೆ ಅಥವಾ ರೋಗ ಗುಣ ಮಾಡಲು ನಿರ್ದಿಷ್ಟ ಔಷಧವಿಲ್ಲ. 1990 ರಿಂದ ಕೆಎಫ್‌ಡಿ ನಿರೋಧಕ ಚುಚ್ಚು ಮದ್ದನ್ನು ರೋಗ ಹರಡುತ್ತಿರುವ ಭಾಗದಲ್ಲಿ ನೀಡಲಾಗುತ್ತಿತ್ತು. 4 ವಾರಗಳ ಅಂತರದಲ್ಲಿ ಎರಡು ಬಾರಿ, ನಂತರ 6 ರಿಂದ 9 ತಿಂಗಳ ಅಂತರದಲ್ಲಿ ಇನ್ನೊಮ್ಮೆ ಚುಚ್ಚು ಮದ್ದು ಪಡೆದರೆ, ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು. ಆದರೆ, ಡಬ್ಲುಎಚ್‌ಒ ಅನುಮತಿ ದೊರೆಯದ ಕಾರಣ 2022 ಚುಚ್ಚುಮದ್ದು ಉತ್ಪಾದನೆ ಹಾಗೂ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ. ರೋಗ ಬಂದಿರುವುದು ಖಚಿತವಾದರೆ, ಅದರ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿದ್ದಾಪುರದ ದೊಡ್ಮನೆ ಭಾಗದಲ್ಲಿ ಇಷ್ಟು ವರ್ಷ ಕೆಎಫ್‌ಡಿ ವ್ಯಾಪಕವಾಗಿತ್ತು. ಈ ಬಾರಿ ಅಲಗೇರಿ ಭಾಗದಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಔಷಧ ಸಂಶೋಧನೆಗೆ ಒತ್ತಾಯ
1957 ರಿಂದಲೂ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು ಭಾಗಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. 6 ದಶಕಗಳಲ್ಲಿ 800 ಕ್ಕೂ ಅಽಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟç, ಗೋವಾ ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕೆಎಫ್‌ಡಿ ಕಂಡುಬರುತ್ತಿದೆ. ಕೆಎಫ್‌ಡಿ ನಿಯಂತ್ರಣಕ್ಕೆ ಲಸಿಕೆ ಅಥವಾ ಅದನ್ನು ಗುಣಪಡಿಸಲು ಬೇಕಾದ ಔಷಧ ಕಂಡುಹಿಡಿಯಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆದರೆ, ಯಾವುದೇ ಸರ್ಕಾರಗಳು ಮಲೆನಾಡಿನ ಭಾಗದ ಜನರ ಗೋಳನ್ನು ಗಂಭೀರವಾಗಿ ಸ್ವೀಕರಿಸುತ್ತಿಲ್ಲ, ಎಂಬುದು ಸಿದ್ದಾಪುರ ಬಾಳಗೋಡಿನ ಲಂಬೋದರ ಹೆಗಡೆ ಅವರ ಆಕ್ಷೇಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net