ಯೋಜನೆಗಳ ತಿಳಿಯಲು ಶಿಕ್ಷಣ ಮುಖ್ಯ

kst-1
ನೆರೆಬೆಂಚಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಉಪ್ಪಲದಿನ್ನಿ ತಮಟೆ ಬಾರಿಸಿ ಚಾಲನೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಕಲಾವಿದ ಶರಣಪ್ಪ ವಡಗೇರಿ, ಗ್ರಾಪಂ ಸದಸ್ಯರಾದ ಶೇಖಪ್ಪ ಮ್ಯಾಗಳಮನಿ, ಹನುಮಗೌಡ ಪಾಟೀಲ್, ಶರಣಪ್ಪ ಮೇಟಿ, ಚಂದ್ರಶೇಖರ ಗದ್ದಿ, ಭರಮಣ್ಣ ಕಲಗೋಡಿ ಇತರರಿದ್ದರು.
Published on

ಕುಷ್ಟಗಿ; ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಅವರ ಭವಿಷ್ಯ ಸುಂದರಗೊಳಿಸುವ ಕಾರ್ಯವನ್ನು ಪಾಲಕರು ಮಾಡಬೇಕಿದೆ ಎಂದು ಕಲಾವಿದ ಬಸವರಾಜ ಉಪ್ಪಲದಿನ್ನಿ ಹೇಳಿದರು.

ತಾಲೂಕಿನ ಕಂದಕೂರು ಗ್ರಾಪಂ ವ್ಯಾಪ್ತಿಯ ನೆರೆಬೆಂಚಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕಿದ್ದು, ಇವುಗಳ ಬಗ್ಗೆ ತಿಳಿಯಲು ಶಿಕ್ಷಣವೂ ಮುಖ್ಯವಾಗಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಉಪ್ಪಲದಿನ್ನಿ ತಮಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾವಿದರಾದ ಶರಣಪ್ಪ ಬನ್ನಿಗೋಳ ಸುಗ್ಗಿಯ ಹಾಡು, ದೇವೇಂದ್ರಪ್ಪ ಕಮ್ಮಾರ ವಚನ ಗಾಯನ, ವೀರಯ್ಯ ಹಿರೇಮಠ ಹಾಗೂ ಬಸವರಾಜ ಉಪ್ಪಲದಿನ್ನಿ ಜಾಗೃತಿ ಗೀತೆ ಹಾಡಿದರು.

ಶಿವಲಿಂಗಪ್ಪ ಪೂಜಾರ ಹಾಗೂ ಕಲಾವಿದರು ಸ್ವಚ್ಛಭಾರತ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net