ನಾಲ್ಕು ಸರ್ಕಾರಿ ಶಾಲೆಗಳು ಬಂದ್

hnl hunasehalli school june 25
Published on

ಶ್ರೀನಿವಾಸ್ ಟಿ. ಹೊನ್ನಾಳಿ

ಸರ್ಕಾರಿ ಶಾಲೆಗಳಲ್ಲಿ ಓದಿದ ಅದೆಷ್ಟೋ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೀಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪಾಲಕರು ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ.

ಮಕ್ಕಳ ದಾಖಲಾತಿ ಕೊರತೆ ಕಾರಣ ಹೊನ್ನಾಳಿ- ನ್ಯಾಮತಿ ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ಮುಚ್ಚಲು ಹೊರಟಿದೆ.

ಹೊನ್ನಾಳಿ ತಾಲೂಕಿನ ಹುಣಸೆಹಳ್ಳಿ ಕಿ.ಪ್ರಾ. ಶಾಲೆಯಲ್ಲಿ ಒಂದು ನ್ಯಾಮತಿ ತಾಲೂಕು ಮಾದಾಪುರ ತಾಂಡದ ಕಿ.ಪ್ರಾ. ಶಾಲೆಯಲ್ಲಿ ಇಬ್ಬರು, ಕಂಚಿನಹಳ್ಳಿ ಶಾಲೆಯಲ್ಲಿ ಇಬ್ಬರು, ಬೆಳಗುತ್ತಿ ಮಲ್ಲಿಗೇನಹಳ್ಳಿ ಹಿ.ಪ್ರಾ. ಶಾಲೆಯಲ್ಲಿ ಐವರು ವಿದ್ಯಾರ್ಥಿಗಳು ದಾಖಲಾಗಿದ್ದರು.

ಪಾಲಕರು ಈ ಎಲ್ಲ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಿಸಿದ್ದರಿಂದ ನಾಲ್ಕು ಶಾಲೆಗಳಿಗೆ ಬೀಗ ಹಾಕಲಾಗಿದೆ.

2024-25ನೇ ಸಾಲಿನಲ್ಲಿ ಮಾದಾಪುರ ತಾಂಡದಲ್ಲಿ 2, ಕಂಚಿನಹಳ್ಳಿ 9, ಹುಣೆಸೆ ಹಳ್ಳಿಯಲ್ಲಿ 2, ಬೆಳಗುತ್ತಿ ಮಲ್ಲಿಗೇನಹಳ್ಳಿ ಶಾಲೆಯಲ್ಲಿ 23 ಸೇರಿ ಒಟ್ಟು 36 ವಿದ್ಯಾರ್ಥಿಗಳಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕೇವಲ 10 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು.

ದಾಖಲಾದ ವಿದ್ಯಾರ್ಥಿಗಳ ಪಾಲಕರು ವರ್ಗಾವಣೆ ಪತ್ರ ತೆಗೆದುಕೊಂಡು ಹೋದ ಕಾರಣ ಸರ್ಕಾರ ತಾತ್ಕಾಲಿಕವಾಗಿ ಶಾಲೆಯನ್ನು ಬಂದ್ ಮಾಡಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಶೈಕ್ಷಣಿಕ ವರ್ಷಾರಂಭದಲ್ಲಿ ದಾಖಲಾತಿ ಆಂದೋಲನ ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದ್ದರೂ ಏನು ಪ್ರಯೋಜನವಾಗುತ್ತಿಲ್ಲ ಎನ್ನುತ್ತದೆ ಶಿಕ್ಷಕರ ವರ್ಗ.

ಕಾರಣ ಏನೇ ಇರಲಿ, ಪಾಲಕರು, ಶಿಕ್ಷಕರ ವರ್ಗ, ಶಿಕ್ಷಣ ಇಲಾಖೆ, ಕನ್ನಡಪರ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗದಿದ್ದರೆ, ಮತ್ತಷ್ಟು ಶಾಲೆಗಳು ಮುಚ್ಚುವ ಸಮಯ ಬಹಳ ದೂರವಿಲ್ಲ.

ಚಿಕ್ಕಹಾಲಿವಾಣ ಶಾಲೆಗೆ ಗಡುವು: ಚಿಕ್ಕಹಾಲಿವಾಣದಲ್ಲೂ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಹಿರಿಯ ವಿದ್ಯಾರ್ಥಿಗಳಿಬ್ಬರು ಅವರ ಇಬ್ಬರು ಮಕ್ಕಳನ್ನು ಶಾಲೆಗೆ ದಾಖಲಿಸುವ ಜತೆಗೆ ಇನ್ನೂ 4-5 ವಿದ್ಯಾರ್ಥಿಗಳನ್ನು ದಾಖಲಿಸುವ ಭರವಸೆ ನೀಡಿವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಲು ಸಮಯಾವಕಾಶ ನೀಡಲಾಗಿದೆ.ನಿಗದಿತ ಸಮಯದೊಳಗೆ ಮಕ್ಕಳನ್ನು ದಾಖಲಿಸದಿದ್ದರೆ ಶಾಲೆ ಮುಚ್ಚಲಾಗುವುದು ಎಂದು ಬಿಇಒ ನಿಂಗಪ್ಪ ತಿಳಿಸಿದ್ದಾರೆ.

ಆಳುವ ಸರ್ಕಾರಗಳಿಗೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಇಚ್ಛಾಶಕ್ತಿ ಇಲ್ಲ. ಒಂದು ಕನ್ನಡ ಸರ್ಕಾರಿ ಶಾಲೆ ಮುಚ್ಚಿದರೆ ನೂರು ಜನ ಕನ್ನಡ ಮಾತನಾಡುವುದು ಕಡಿಮೆ ಆದಂತೆ. ಈಗಲಾದರೂ ಎಚ್ಚೆತ್ತು ದಾಖಲಾತಿ ಹೆಚ್ಚಳಕ್ಕೆ ಮಾಗೋಪಾಯ ಕಂಡು ಹಿಡಿಯಬೇಕು. ಇಲ್ಲದಿದ್ದರೆ ಸರ್ಕಾರವೇ ಕನ್ನಡ ಭಾಷೆ ಕೊಲೆ ಮಾಡಿದಂತಾಗುತ್ತದೆ. | ಜಿ.ಬಿ. ವಿನಯಕುಮಾರ್, ಇನ್​ಸೈಟ್ಸ್ ಸಂಸ್ಥಾಪಕ, ದಾವಣಗೆರೆ.

ಐದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು. ಇದ್ದ ಇಬ್ಬರು ವಿದ್ಯಾರ್ಥಿಗಳು ಕೂಡ ಟಿಸಿ ಪಡೆದು ಬೇರೆ ಶಾಲೆಗೆ ಸೇರಿದ್ದರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಶಾಲೆಗಳಿಗೆ ದಾಖಲಾತಿಯಾದರೆ ಪುನಃ ಪ್ರಾರಂಭಿಸಲಾಗುವುದು. | ನಿಂಗಪ್ಪ, ಬಿಇಒ ಹೊನ್ನಾಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net