ಮಾಯಕೊಂಡದಲ್ಲಿ ಬೀದಿ ನಾಯಿಗಳಿವೆ ಹುಷಾರ್..!

21myk 1a
Published on

ಮಾಯಕೊಂಡ: ಕಳೆದ ಏಳೆಂಟು ತಿಂಗಳಿಂದ ಬೀದಿ ನಾಯಿಗಳ ಹಾವಳಿಗೆ ಮಾಯಕೊಂಡದ ಜನರು ತತ್ತರಿಸಿ ಹೋಗಿದ್ದಾರೆ. ಶ್ವಾನಗಳು ಗುಂಪಾಗಿ ಗ್ರಾಮಸ್ಥರು,ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.

ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ಇದ್ದರೂ ಗ್ರಾಮ ಪಂಚಾಯಿತಿ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿರುವುದು ವಿಪರ್ಯಾಸವೇ ಸರಿ.

ಸುಮಾರು 2 ಸಾವಿರ ಮನೆಗಳಿರುವ ಗ್ರಾಮದ ಕಾಲನಿಗಳಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಜನರು ಹೈರಾಣಾಗಿದ್ದಾರೆ. ಕಳೆದ ವಾರವಷ್ಟೇ ಉಪ್ಪಾರ ಕಾಲನಿಯಲ್ಲಿ ಮಂಜುನಾಥ್ ಎನ್ನುವವರಿಗೆ ನಾಯಿ ಕಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ ಕುರುಬ ಕಾಲನಿಯ ರೈತ ತೋಳಜ್ಜರ ರುದ್ರಪ್ಪ ಅವರ ಕುರಿಯನ್ನು ಬಲಿ ಪಡೆದಿವೆ.

ಏಳೆಂಟು ತಿಂಗಳ ಹಿಂದೆ 25- 30 ಜನರಿಗೆ ನಾಯಿ ಕಡಿದಿತ್ತು. ಈ ಕುರಿತು ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಕೂಡಲೇ ಎಚ್ಚೆತ್ತ ಗ್ರಾಪಂ, ಬೀದಿ ನಾಯಿ ಹಿಡಿಯುವವರನ್ನು ಕರೆಸಿ ನಾಯಿಗಳನ್ನು ಬೇರೆಡೆ ಸಾಗಿಸಿತು.

ಈಗ ಮತ್ತೆ ಶ್ವಾನಗಳ ಹಾವಳಿ ಜಾಸ್ತಿಯಾಗಿದೆ. ಮನೆಯಿಂದ ಹೊರಗೆ ಬಂದರೆ ಏಕಾಏಕಿ ದಾಳಿ ನಡೆಸುತ್ತವೆ. ಹೊಡೆಯಲು ಹೋದರೆ ಗುಂಪಾಗಿ ಮೈಮೇಲೆ ಬರುತ್ತವೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿವೆ. ಸೋಮವಾರ ರಾತ್ರಿ ನಮ್ಮ ಕುರಿಗಳ ಕೊಟ್ಟಿಗೆ ಮೇಲೆ ಸುಮಾರು 10-12 ನಾಯಿಗಳು ದಾಳಿ ಮಾಡಿ ಒಂದು ಕುರಿಯನ್ನು ಎಳೆದೊಯ್ದು ಕಚ್ಚಿ ಸಾಯಿಸಿವೆ. ಗ್ರಾಪಂ ಕ್ರಮ ಕೈಗೊಳ್ಳಬೇಕು. | ತೋಳಜ್ಜರ ರುದ್ರಪ್ಪ, ಕೃಷಿಕ. 8 ತಿಂಗಳ ಹಿಂದೆ ಹಾವೇರಿಯಿಂದ ನಾಯಿ ಹಿಡಿಯುವವರನ್ನು ಕರೆಸಲಾಗಿತ್ತು. ದಾವಣಗೆರೆ ಮಹಾನಗರ ಪಾಲಿಕೆಯವರು ಹೆಣ್ಣು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೊಡಿಸಿ ಪುನಃ ಗ್ರಾಮಕ್ಕೆ ತಂದು ಬಿಡುತ್ತಾರೆಂಬ ಮಾಹಿತಿ ಇದೆ. ಅಧಿಕಾರಿಗಳ ಜತೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು. | ಎನ್. ಶ್ರೀನಿವಾಸ್, ಪಿಡಿಒ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net