

ಜಗಳೂರು: ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ ಸರ್ಕಾರದ ಜುಟ್ಟು ಹಿಡಿದು ಎಚ್ಚರಿಸಬೇಕಾಗಿದೆ ಎಂದು ದಲಿತ ಸಂಘಟನೆಯ ರಾಜ್ಯ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಒಳಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂಬ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಮಾತನಾಡಿದರು.
ಒಳಮೀಸಲಾತಿ ಜಾರಿ ಮಾಡಬೇಕು ಎನ್ನುವ ಉದ್ದೇಶದ ಜತೆಗೆ ಒಳ ಮೀಸಲಾತಿ ಹೆಸರಿನಲ್ಲಿ ನಡೆಯುತ್ತಿರುವ ಮೋಸವನ್ನು ಜನರಿಗೆ ತಿಳಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸುವ ರಥಯಾತ್ರೆಯಾಗಿದೆ ಎಂದರು.
ಬಡ್ತಿ ನೇಮಕಾತಿ ಮಾಡುತ್ತಿಲ್ಲ. ಒಳ ಮೀಸಲಾತಿಯಾಗದೆ ಯಾವುದೇ ಬಡ್ತಿಯನ್ನು ನೀಡುವುದಿಲ್ಲ. ನಮಗೆ ಗೊತ್ತಿಲ್ಲದೆ ಬಡ್ತಿ ನೀಡಿದ್ದರೆ ರದ್ದು ಮಾಡ್ತೀವಿ ಎಂದು ಸುಳ್ಳು ಹೇಳಿ, ವಂಚಿಸಿ, ಮೋಸ ಮಾಡಿದ ಸಿಎಂ ಸಿದ್ದರಾಮಯ್ಯನವರನ್ನು ಎರಡನೇ ಅಂಬೇಡ್ಕರ್ ಎಂದು ಹೇಳಿಕೊಂಡು ಓಡಾಡಿದ ಮಾದಿಗ ಸಮುದಾಯದ ಎಚ್. ಆಂಜನೇಯ ಅವರನ್ನು ಖಂಡಿಸುತ್ತೇನೆ. ಸಿಎಂ ಓಲೈಕೆಯನ್ನು ಕೈಬಿಡಬೇಕು, ನ್ಯಾಯಕ್ಕಾಗಿ ಹೋರಾಡಬೇಕು ಎಂದರು.
ಸರ್ಕಾರ ಮತ್ತೊಂದು ಸಮೀಕ್ಷೆಯನ್ನು ನಮ್ಮ ತಲೆ ಮೇಲೆ ಹಾಕಿದೆ. ಸಮೀಕ್ಷೆ ಮುಗಿದಾಕ್ಷಣ ಮೀಸಲಾತಿ ಸಿಗುತ್ತದೆ ಎಂಬ ಕನಸು ಕಾಣಬೇಡಿ, ಇದೊಂದು ಮೋಸ ಮಾಡುವ ಸರ್ಕಾರವಾಗಿದೆ. ಹಾಗಾಗಿ ಜೂನ್ 9 ಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರಾಯಚೂರು ಪ್ರಭುರಾಜ್ ಕೊಡ್ಲಿ, ಬಳ್ಳಾರಿ ಎಸ್. ಮಲಿಯಪ್ಪ, ಮೈಸೂರು ಪುಟ್ಟಣ್ಣ, ಗದಗ ಹೊಸಮನಿ, ಎಲಿಯಾಸ್ ರೆಡ್ಡಿ, ಹೊಸಪೇಟೆ ಹನುಮೇಶ್, ಸಿ. ಬಸವರಾಜ್, ಹೆಗ್ಗೆರೆ ರಂಗಪ್ಪ, ರಘು, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕುಬೇರಪ್ಪ, ತಾಲೂಕಾಧ್ಯಕ್ಷ ಹನುಮಂತಪ್ಪ, ಚದರಗೋಳ ಆನಂದಪ್ಪ, ದಸಂಸ ಸಂಚಾಲಕ ಕುಬೇಂದ್ರಪ್ಪ, ಸೂರಡ್ಡಿಹಳ್ಳಿ ರವಿ, ಜಿ.ಎಚ್. ಶಂಭುಲಿಂಗಪ್ಪ, ಎ.ಕೆ. ಯಲ್ಲಪ್ಪ, ಶಿವಣ್ಣ, ಮಾಚಿಕೆರೆ ಯಲ್ಲಪ್ಪ, ಗೌರಿಪುರ ಸತ್ಯಮೂರ್ತಿ, ಚಂದ್ರಪ್ಪ, ಹನುಮಂತಪ್ಪ ಸೇರಿ ಮತ್ತಿತರರಿದ್ದರು.
ಅರ್ಥವಿಲ್ಲದ ಸಾಧನಾ ಸಮಾವೇಶ: ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂದು ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಗೆ 38 ಸಾವಿರ ರೂ. ಮೀಸಲಿದೆ ಎಂದು ಹೇಳಿ ಅದರಲ್ಲಿ 25 ಸಾವಿರ ಕೋಟಿ ರೂ. ಕಳ್ಳತನ ಮಾಡಿರುವುದು ಯಾವ ಸಾಧನೆ. ಒಳ ಮೀಸಲಾತಿ ಜಾರಿ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳಾಗಿದೆ. ಆದರೂ ಜಾರಿ ಮಾಡಿಲ್ಲ. ಆಂಧ್ರ, ತೆಲಂಗಾಣ ಸರ್ಕಾರಗಳಿಂದ ಈ ಕಾರ್ಯ ಆಗಿದ್ದು, ಕರ್ನಾಟಕ ಸರ್ಕಾರದಿಂದ ಸಾಧ್ಯವಾಗಿಲ್ಲ. ಇದು ಸಾಧನೆಯೇ? ಎಂದು ಬಿ.ಆರ್. ಭಾಸ್ಕರ್ ಪ್ರಸಾದ್ ಪ್ರಶ್ನಿಸಿದರು.