

ಜಗಳೂರು: ಭೋವಿ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ನೇರ್ಲಗುಂಟೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಭೋವಿ ಸಮುದಾಯದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಪ್ರವಾಸ ಮಾಡಿ ಸಮಾಜದ ಸ್ಥಿತಿಗತಿಯನ್ನು ಸ್ವತಃ ಅರ್ಥೈಸಿಕೊಂಡು ಸ್ಪಂದಿಸುತ್ತೇನೆ. ಭೋವಿ ಜನಾಂಗದಿಂದ ಸಂಸದನಾಗಬೇಕು ಎಂಬ ಆಸೆ ಇದೆ. ಆದರೆ ಟಿಕೆಟ್ ವಂಚಿತನಾಗಿದ್ದೇನೆ. ಮುಂದಿನ ದಿನಗಳಲ್ಲಾದರೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ನನಗಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ನೂರಾರಿದ್ದರೂ ಪ್ರಚಾರದ ಕೊರತೆಯಿಂದ ರಾಜ್ಯದ ಜನತೆಗೆ ತಿಳಿಯುತ್ತಿಲ್ಲ. ದಲಿತ, ಹಿಂದುಳಿದವರ ಅಭಿವೃದ್ಧಿಗೆ ಒತ್ತು ನೀಡುವ ಕಾಂಗ್ರೆಸ್ ಸರ್ಕಾರಕ್ಕೆ ಭೋವಿ ಸಮುದಾಯ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ತಾಲೂಕಿನ ಭೋವಿ ಸಮುದಾಯದ ಅಭಿವೃದ್ಧಿಗೆ ಸಿಂಹಪಾಲು ಅನುದಾನ ತರಲಾಗುವುದು. ಈಗ ಭೋವಿ ನಿಗಮಕ್ಕೆ ಹೊಸ ಸಾರಥಿ ಸಿಕ್ಕಿರುವುದು ಮತ್ತಷ್ಟು ಆನೆಬಲ ಬಂದಂತಾಗಿದೆ. ಅಭಿವೃದ್ಧಿ ವಿಚಾರದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಕ್ಷೇತ್ರದಲ್ಲಿ ಭೋವಿ ಮತ್ತು ಛಲವಾದಿ ಸಮಾಜದವರಿಗೆ ಸಮುದಾಯ ಭವನ ಸೇರಿ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾಜದ ಮುಖಂಡ ವಕೀಲ ಡಿ. ಶ್ರೀನಿವಾಸ್ ಮಾತನಾಡಿ, ಭೋವಿ ಸಮುದಾಯದವರು ಶ್ರಮ ಜೀವಿಗಳಾಗಿದ್ದು, ಹೊಟ್ಟೆಪಾಡಿಗಾಗಿ ರಾಜ್ಯದ ನಾನಾ ಭಾಗಗಳಿಗೆ ಗುಳೆ ಹೋಗುತ್ತಿರುವುದು ಇಂದಿಗೂ ಜೀವಂತವಾಗಿರುವುದು ಬೇಸರ ತಂದಿದೆ. ಅವರಿಗೆ ಬೇಕಾದ ಸರ್ಕಾರದ ಸವಲತ್ತುಗಳು, ಉದ್ಯೋಗ, ಸ್ವಾವಲಂಬಿ ಬದುಕು ರೂಪಿಸಿಕೊಡಲು ಅಧ್ಯಕ್ಷರು ಹೆಚ್ಚು ಗಮನಹರಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಜಯ್ಯಪ್ಪ, ತಾಲೂಕಾಧ್ಯಕ್ಷ ಅರ್ಜುನ್, ಮುಖಂಡರಾದ ಮುಸ್ಟೂರು ಪುಟ್ಟಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್, ದೇವರಾಜ್, ಜಯ್ಯಪ್ಪ, ಬಸವರಾಜ್, ಶಿಲ್ಪಾ, ದಾಸಪ್ಪ, ಪಲ್ಲಾಗಟ್ಟೆ ವೀರೇಶ್, ಬಸವರಾಜ್, ಹನುಮಂತಪ್ಪ ಮತ್ತಿತರರಿದ್ದರು.