ಸುಲಭ ಜಯ ಸಾಧಿಸಿದ ಪ್ರಮುಖ ಆಟಗಾರರು

15 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ ರಾಜಾಧ್ಯಕ್ಷ ಪೆವಿಲಿಯನ್ ಅಂಕಣದಲ್ಲಿ ಭಾನುವಾರದಿಂದ ಆರಂಭವಾದ ಐಟಿಎಫ್ ಧಾರವಾಡ ಪುರುಷರ ವಿಶ್ವ ಟೆನಿಸ್ ಪಂದ್ಯಾವಳಿಯ ಮೊದಲ ಹಂತದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತದ ಮಾಜಿ ಡೆವಿಸ್ ಕಪ್ ಆಟಗಾರ ಮತ್ತು ಒಲಿಂಪಿಕ್ ಪಟು ವಿಷ್ಣುವರ್ಧನ ಸೇರಿ ಪ್ರಮುಖ ಆಟಗಾರರು ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಅಗ್ರ ಶ್ರೇಯಾಂಕ ಪಡೆದಿರುವ ವಿಷ್ಣುವರ್ಧನ ತಮ್ಮ ಎದುರಾಳಿ ಪಾರ್ಥ ಅಗರವಾಲ್ ವಿರುದ್ಧ 6-3, 6-2 ಅಂಕಗಳ ಅಂತರದಿಂದ ಸುಲಭ ಜಯಗಳಿಸಿದರೆ, ಇನ್ನೊಂದು ಪಂದ್ಯದಲ್ಲಿ ಪಂದ್ಯದಲ್ಲಿ ಸೂರಜ ಪ್ರಬೋಧ 6ನೇ ಶ್ರೇಯಾಂಕಿತ ಅಥರ್ವ ಶರ್ಮಾ ವಿರುದ್ಧ 6-2, 6-3ರ ಅಂತರದಿಂದ ಜಯ ಸಾಧಿಸಿದರು.
ಅರ್ಹತಾ ಪಂದ್ಯಗಳಿಗೆ ನೇರವಾಗಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಸ್ಥಳೀಯ ಯುವ ಆಟಗಾರ ಅಮರ ಧರೆಣ್ಣವರ ಆರಂಭದಲ್ಲಿ ಉತ್ತಮ ಪ್ರತಿರೋಧ ತೋರಿದರೂ ನಂತರ ಎದುರಾಳಿ ವಿಯೆಟ್ನಾಂದ ಹಾ ಮಿನ್ಹ್ ಡುಕ್ ವು ಬಿರುಸಿನ ಆಟಕ್ಕೆ ಮಣಿಯಬೇಕಾಯಿತು. ಹಾ ಮಿನ್ಹ್ 6-2, 6-0 ಅಂಕಗಳಿಂದ ಜಯಶಾಲಿಯಾದರು.
ದೀಪಕ ಅನಂತರಾಮು ಅವರು 3ನೇ ಶ್ರೇಯಾಂಕಿತ ಫೈಸಲ್ ಕಮರ್‌ಗೆ 6-0, 6-4 ರಿಂದ ಸುಲಭ ತುತ್ತಾದರು.
ಉಳಿದ ಪಂದ್ಯಗಳಲ್ಲಿ ರಣಜೀತ ವಿರಾಳಿ ಮುರುಗೇಶನ್ ವಿರುದ್ಧ ಯಶ್ ಚೌರಾಸಿಯಾ 6-1, 6-2 ಅಂತರದಿಂದ, ಲೂಕ್ ಸೋರೆನ್‌ಸೆನ್ (ಆಸ್ಟ್ರೇಲಿಯಾ) ವಿರುದ್ಧ ಅರ್ಜುನ್ ಮಹಾದೇವನ್ 7-6 (4), 6-3 ಅಂತರದಿಂದ ಜಯಗಳಿಸಿದರು.
ಜಾಕ್ ಕಾರ್ಲಸನ್ ವಿಸ್ಟ್ರಾಂಡ (ಸ್ವೀಡನ್) ವಿರುದ್ಧ ಧೀರಜ್ ಕೋಡಂಚಾ ಶ್ರೀನಿವಾಸನ್ 6-2, 6-3 ಅಂತರದಿಂದ, ಎನ್ರಿಕೋ ಗೀಯಾಕೋಮೆನಿ (ಇಟಲಿ) ವಿರುದ್ಧ ಜೇಕ್ ಭಾಂಗಡಿಯಾ (ಅಮೆರಿಕಾ) 6-1, 6-3 ಅಂತರದಿಂದ, ಮಾಧ್ವಿನ್ ಕಾಮತ್ ವಿರುದ್ಧ ಮ್ಯಾಥ್ಯೂ ಓರ್ಯಾಂಡಲ್ (ಆಸ್ಟ್ರೇಲಿಯಾ) 7-6 (2), 6-1 ಅಂತರದಿಂದ ಜಯಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net