

ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ಸುಚಿರಾಯು ಆಸ್ಪತ್ರೆಯ ವೈದ್ಯರು, ಕೀ ಹೋಲ್ ಕಾಡಿರ್ಯಾಕ್ ಸರ್ಜರಿ ನಡೆಸುವ ಮೂಲಕ ಹಳಿಯಾಳದ 48 ವರ್ಷದ ಮಹಿಳೆಯೊಬ್ಬರ ಪ್ರಾಣ ಉಳಿಸಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಎನ್ನಲಾಗುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಗುಣವಾಗಿ ಸಾಮಾನ್ಯರಂತೆ ಓಡಾಡುತ್ತಿದ್ದಾರೆ.
ಹೃದಯರೋಗ ಶಸ್ತ್ರ ಚಿಕಿತ್ಸಕ ಡಾ. ಷಣ್ಮುಖ ಹಿರೇಮಠ, ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.
20 ವರ್ಷಗಳಿಂದ ಈ ಮಹಿಳೆಗೆ ರುಮ್ಯಾಟಿಕ್ ಹೃದ್ರೋಗವಿತ್ತು. 12 ವರ್ಷದ ಹಿಂದೆ ಬಲೂನ್ ಮಿಟ್ರಲ್ ವಾಲ್ವ್ಟಮಿಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ ತೀವ್ರಗೊಂಡು ನಡೆದಾಡಲೂ ತೊಂದರೆ ಅನುಭವಿಸುತ್ತಿದ್ದರು. ಶ್ವಾಸಕೋಶದ ಒಳಭಾಗ ಗಟ್ಟಿಯಾಗಿತ್ತು. ಅದನ್ನು ಮೆದುಗೊಳಿಸಿ ಶಸ್ತ್ರ ಚಿಕಿತ್ಸೆ ಆರಂಭಿಸಬೇಕಿತ್ತು. ಮೊದಲು ಶ್ವಾಸಕೋಶಕ್ಕೆ ಚಿಕಿತ್ಸೆ ನೀಡಿ ಮೆದುಗೊಳಿಸಿ, ಶಸ್ತ್ರ ಚಿಕಿತ್ಸೆ ನೆರವೇರಿಸಲು ನಿರ್ಧರಿಸಲಾಯಿತು ಎಂದರು.
ಮಹಿಳೆಯ ಬಲಭಾಗದ ಎದೆಗೂಡಿನ ಮೂಲಕ 5 ಸೆಂ.ಮೀ. ರಂಧ್ರಮಾಡಿ ಕೀಹೋಲ್ ಕಾರ್ಡಿಯಾಕ್ ಸರ್ಜರಿ ನೆರವೇರಿಸಲಾಯಿತು. ಶಸ್ತ್ರ ಚಿಕಿತ್ಸೆ ಮರುದಿನ ವೆಂಟಿಲೇಟರ್ ಹೊರ ತೆಗೆಯಲಾಯಿತು. ಈ ಶಸ್ತ್ರ ಚಿಕಿತ್ಸೆಯಲ್ಲಿ ನೋವು ಕಡಿಮೆ ಇರುತ್ತದೆ. ಹೃದಯದಿಂದ ರಕ್ತಸ್ರಾವವೂ ಬಹಳಷ್ಟು ಆಗಲಿಲ್ಲ. ಓಪನ್ ಹಾರ್ಟ್ ಸರ್ಜರಿಗಿಂತ ಇದು ಒಳ್ಳೆಯ ಶಸ್ತ್ರ ಚಿಕಿತ್ಸೆ. ಇನ್ಮುಂದೆ ಈ ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಬಹುದು ಎಂದರು.
ಆಸ್ಪತ್ರೆ ಸಿಒಒ ಜಯಕಿಶನ್ ಸುದ್ದಿಗೋಷ್ಠಿಯಲ್ಲಿದ್ದರು.