ಪಂಚಾಯಿತಿಗೆ ಮನೆ ಬಾಡಿಗೆದಾರರ ಮಾಹಿತಿ : ಕೆಯ್ಯೂರು ಗ್ರಾಪಂ ಸಭೆಯಲ್ಲಿ ತೀರ್ಮಾನ : ಚಡ್ಡಿ ಗ್ಯಾಂಗ್ ಕಥೆ ಸೃಷ್ಟಿಸಿದ್ದ ಮಹಿಳೆ

Published on

ಪುತ್ತೂರು ಗ್ರಾಮಾಂತರ: ಬಾಡಿಗೆ ಮನೆಗಳನ್ನು ನೀಡುವ ಮನೆಯ ಮಾಲೀಕರು, ಅಪರಿಚಿತರಿಗೆ ಬಾಡಿಗೆ ಮನೆ ನೀಡುವ ವೇಳೆ ಆಧಾರ್‌ಕಾರ್ಡ್ ಸಹಿತ ಸಂಪೂರ್ಣ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಗೆ ಮತ್ತು ಪೊಲೀಸ್ ಠಾಣೆಗೆ ನೀಡಬೇಕು ಎಂಬ ಆಗ್ರಹ ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.

ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಸದಸ್ಯ ಬಟ್ಯಪ್ಪ ರೈ ದೇರ್ಲ ವಿಷಯ ಪ್ರಸ್ತಾಪಿಸಿ, ಕೆಯ್ಯೂರು ಗ್ರಾಮದ ಸಣಂಗಳದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಮಹಿಳೆ ‘ಚಡ್ಡಿಗ್ಯಾಂಗ್’ ಕಥೆ ಕಟ್ಟಿದ್ದು ಪ್ರಕರಣದ ಸತ್ಯಾಂಶ ಏನು? ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಚಡ್ಡಿ ಗ್ಯಾಂಗ್ ಮಹಿಳೆಯ ಕಟ್ಟುಕಥೆಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪೊಲೀಸರು ಪರಿಶೀಲನೆ ನಡೆಸಿದ ವೇಳೆ ತಿಳಿದು ಬಂದಿದೆ. ಮಹಿಳೆಯ ಬಾಡಿಗೆ ಮನೆಯನ್ನು ಖಾಲಿ ಮಾಡಿಸುವಂತೆ ಮನೆಯ ಮಾಲೀಕರಲ್ಲಿ ಮಾತುಕತೆ ನಡೆಸಲಾಗಿದ್ದು, ಅವರಿಗೂ ಸೂಚನೆ ನೀಡಲಾಗಿದೆ ಎಂದರು.

ಬಟ್ಯಪ್ಪ ರೈ ಮಾತನಾಡಿ, ಬಾಡಿಗೆ ಮನೆ ನೀಡುವ ಮೊದಲು ಸರಿಯಾದ ಮಾಹಿತಿ-ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು. ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಜಯಂತಿ, ತಾರಾನಾಥ ಕಂಪ, ವಿಜಯಕುಮಾರ್ ಎಸ್, ಶೇಷಪ್ಪ ದೇರ್ಲ, ಅಮಿತಾ ಎಚ್.ರೈ, ಮಮತಾ ರೈ, ಮೀನಾಕ್ಷಿ ವಿ.ರೈ, ನೆಬಿಸಾ ಮತ್ತಿತರರು ಸಲಹೆ ನೀಡಿದರು. ಗ್ರಾ.ಪಂ. ಪಿಡಿಒ ನಮಿತಾ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net