

ಕುಣಿಗಲ್: ಪಟ್ಟಣದ ಚಿಕ್ಕೆರೆ ಸಮೀಪ ಶಿಥಿಲಗೊಂಡಿರುವ ರೈಲ್ವೆ ಸೇತುವೆ ಹಾಗೂ ಕೆಶಿಪ್ ರಸ್ತೆಯಲ್ಲಿ ಆಳುದ್ದದ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಪಟ್ಟಣದ ಚಿಕ್ಕೆರೆ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿ ಎರಡು ವರ್ಷ ಕಳೆದಿಲ್ಲ.
ಸೇತುವೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡು ಸೇತುವೆಗೆ ಹಾಕಿರುವ ಕಬ್ಬಿಣದ ಸರಳು ಹೊರಗೆ ಬಂದಿವೆ. ಬಿರುಕುಗಳ ಮೇಲೆ ವಾಹನಗಳು ಸಂಚರಿಸುತ್ತಿದ್ದು, ಇದರಿಂದ ಸೇತುವೆ ಅಲು ಗಾಡುವ ಅನುಭವವಾಗುತ್ತದೆ. ಕಳಪೆ ಕಾಮಗಾರಿ ಮಾಡಿರುವುದರಿಂದ ಸೇತುವೆ ನಿರ್ಮಾಣವಾದ ಎರಡೇ ವರ್ಷದಲ್ಲಿ ಬಾಯಿ ತೆರೆದುಕೊಂಡು ಅಪಾಯಕ್ಕೆ ಆಹ್ವಾನ ಮಾಡಿದೆ. ಭಾರಿ ಗಾತ್ರದ ವಾಹನಗಳು ರಸ್ತೆಯಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ಮೇಲ್ಸೇತುವೆ ಯಾವಾಗ ಬೇಕಾದರೂ ನೆಲಕ್ಕೆ ಉರುಳು ಸಾಧ್ಯತೆ ಇದೆ. ಅಪಾಯ ಸಂಭವಿಸುವ ಮಟ್ಟಕ್ಕೆ ತಲುಪ್ಪಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಅನುಮಾನ ಮೂಡಿಸಿದೆ.
ಅವಘಡ ಸಂಭವಿಸಿ ಪ್ರಾಣ ಹಾನಿಯಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಸಂಬಂಧ ಪ್ರಶ್ನಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾರ ಗಮನಕ್ಕೆ ತರಬೇಕೆಂದು ಕೂಡ ಗೊತ್ತಾಗುತ್ತಿಲ್ಲ ಎಂದು ಪ್ರತಿ ನಿತ್ಯ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರ ಅಳಲಾಗಿದೆ.
ಗುಂಡಿಗಳದ್ದೇ ಕಾರುಬಾರು: ಸೇತುವೆ ಇಳಿಯುತ್ತಿದ್ದಂತೆ ಕೆಶಿಪ್ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ರಸ್ತೆ ತುಂಬೆಲ್ಲ ಆಳುದ್ದ ಗುಂಡಿಗಳು ಬಿದ್ದವೆ. ವಾಹನ ಸವಾರರು ಇಲ್ಲಿ ವಾಹನ ಚಲಾಯಸಬೇಕಾದರೇ ಹರಸಾಹಸ ಪಡಬೇಕು. ಇನ್ನೂ ಬೈಕ್‌ಗಳಲ್ಲಿ ಸಾಕಷ್ಟು ಮಂದಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯಲ್ಲಿ ಟೋಲ್ ಕೂಡ ವಸೂಲಿ ಮಾಡಲಾಗುತ್ತದೆ. ರಸ್ತೆ ನಿರ್ವಹಣೆ ಕೆಶಿಪ್ ಅವರೇ ಮಾಡಬೇಕಾಗಿದ್ದರೂ ರಸ್ತೆಯಲ್ಲಿ ಗುಂಡಿ ಬಿದ್ದು ಮಿನಿ ಕೆರೆಗಳಂತೆ ನೀರು ತುಂಬಿಕೊಂಡಿರುತ್ತದೆ. ಆದರೆ ಕೆಶಿಪ್ ಅಧಿಕಾರಿಗಳು ಕಂಡೂ ಕಾಣದಂತೆ ಇರುತ್ತಾರೆ.
ರೈಲ್ವೆ ಮೇಲ್ಸೇತುವೆ ಬಿರುಕು ಬಿಟ್ಟಿದ್ದು, ಈ ಬಗ್ಗೆ ರೈಲ್ವೆ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸೇತುವೆ ದುರಸ್ತಿ ಮಾಡುವ ಕಾರ್ಯ ಇಲಾಖೆ ಮಟ್ಟದಲ್ಲಿ ಪ್ರಗತಿಯಲ್ಲಿದೆ. ಶೀಘ್ರವೇ ಸೇತುವೆ ದುರಸ್ತಿ ಮಾಡಲಾಗುವುದು. ಜಗದೀಶ್ ಎಇ ರೈಲ್ವೆ ಇಲಾಖೆ ಸೇತುವೆ ಇಳಿಯುತ್ತಿದ್ದಂತೆ ಕೆಶಿಪ್ ರಸ್ತೆ ಗುಂಡಿಗಳ ದರ್ಶನವಾಗುತ್ತದೆ, ಇಲ್ಲಿಯೂ ಬಹಳ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು, ಇಲ್ಲವಾದರೆ ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು, ಇಲ್ಲವೇ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡಿಸಿ ಸಾರ್ವಜನಿಕರ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ. ರಂಗನಾಥ್ ದೈಹಿಕ ಶಿಕ್ಷಣ ಶಿಕ್ಷಕ ಕುಣಿಗಲ್ ರೈಲ್ವೆ ಮೇಲ್ಸೇತುವೆಯಿಂದ ಮುಂದೆ ಕೆಶಿಪ್ ನಾಮಫಲಕ ಇದ್ದು, ಅಲ್ಲಿಂದ ಮುಂದಿನ ರಸ್ತೆ ನಮ್ಮ ವ್ಯಾಪ್ತಿಗೆ ಸೇರುತ್ತದೆ. ಈಗ ಗುಂಡಿ ಬಿದ್ದಿರುವ ರಸ್ತೆ ಜಾಗ ಲೋಕೋಪಯೋಗಿ ಇಲಾಖೆ ವ್ಯಾಪಿಗೆ ಸೇರಲಿದ್ದು, ಅವರೇ ದುರಸ್ತಿ ಮಾಡಬೇಕು. ರಾಜು ಎಇಇ, ಕೆಶಿಪ್