

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಸೊಂಡೆಕೊಪ್ಪ ಮುಖ್ಯರಸ್ತೆಯ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ತಾಲೂಕು ವಕೀಲರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಆರ್.ನಾಗೇಂದ್ರ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಯ 14 ಸ್ಥಾನಗಳಿಗೆ 26 ಮಂದಿ ಸ್ಪರ್ಧಿಸಿದ್ದು, ಸಂಘದ 274 ಮತದಾರ ಪೈಕಿ 265 ಮತದಾರರು ಮತಚಲಾಯಿಸಿದರು. ವಕೀಲ ಕೆ.ಕೇಶವ್‌ಮೂರ್ತಿ 165 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್.ಆರ್.ನಾಗೇಂದ್ರ 94 ಮತ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಎನ್.ರಾಮೇಗೌಡ 150 ಮತ, ಖಜಾಂಜಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಎಸ್.ಲೋಕೇಶ್ 111 ಮತ ಪಡೆದು ಜಯಶೀಲರಾದರು ಎಂದು ಚುನಾವಣಾಧಿಕಾರಿ ಆರ್.ಕೆಂಪಯ್ಯ ತಿಳಿಸಿದರು.
ನೂತನ ಅಧ್ಯಕ್ಷ ಕೆ.ಕೇಶವಮೂರ್ತಿ ಮಾತನಾಡಿ, ವಕೀಲರಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಹಂತ ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.
ಆಡಳಿತ ಮಂಡಳಿಗೆ ಆಯ್ಕೆ: ತಾಲೂಕು ವಕೀಲರ ಸಂಘದ ಆಡಳಿತ ಮಂಡಳಿಗೆ ಸ್ಪರ್ಧಿಸಿದ್ದ ತೇಜರಾಜ 194 ಮತ, ಎಂ.ರವಿಕುಮಾರ್ 189, ಜಿ.ಆನಂದ್‌ಕುಮಾರ್ 189, ಎಸ್.ಜಿ.ಮನು 188, ಎಸ್.ಎಂ.ಹೊನ್ನರಾಜು 179, ಎನ್.ವಸಂತ್‌ಕುಮಾರ್ 177, ವೆಂಕಟೇಗೌಡ 168, ಬಿ.ಎಂ.ಬೈರೇಶ್ 164, ಡಿ.ಮಂಜುನಾಥ್ ನಾಯ್ಕ 138 ಮತ ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಸಿದ್ದಗಂಗಮ್ಮ 154 ಮತ ಪಡೆದು ಆಯ್ಕೆಯಾದರು. ಜತೆಗೆ ಬಿ.ಟಿ.ಮೋಹನ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.
ಟಿಎಪಿಎಸಿಎಂಎಸ್ ಮಾಜಿ ಅಧ್ಯಕ್ಷ ಗುರುಪ್ರಕಾಶ್, ರೋಟರಿ ಅಧ್ಯಕ್ಷ ಎಂ.ಟಿ.ನವೀನ್‌ಕುಮಾರ್, ವಕೀಲರಾದ ಅನ್ನದಾನಯ್ಯ, ನಾರಾಯಣ್‌ಗೌಡ, ದಿಲೀಪ್‌ಕುಮಾರ್, ಜಿ.ಎನ್.ಕನಕರಾಜು, ಗಂಗರಾಜು, ಸತೀಶ್, ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.