

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ, ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‌ಕ್ಲಬ್ ಸಹಯೋಗದಲ್ಲಿ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಹ್ಯಾಂಡ್‌ಬಾಲ್, ಹಗ್ಗಜಗ್ಗಾಟ, ಓಟ, ಏಡಿ ಹಿಡಿಯುವುದು, ಮಹಿಳೆಯರಿಗೆ ಆಯೋಜಿಸಿದ್ದ ಲೆಮೆನ್ ವಿತ್‌ಸ್ಪೂನ್ ನಡಿಗೆ ಸ್ಪರ್ಧೆಯಲ್ಲಿ ಸುಮಾರು 70 ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಕೆಸರು ಎಂಬ ಅನುಭವನ್ನೇ ಇನ್ನೂ ಅನುಭವಿಸಿಲ್ಲ. ಮಳೆ, ಚಳಿ, ಗಾಳಿಯ ನಡುವೆ ಭತ್ತದ ಗದ್ದೆಯಲ್ಲಿ ಹೊತ್ತು ಕಳೆಯುವುದೇ ಸವಾಲು. ಇದರ ನಡುವೆ ಗದ್ದೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ದೈಹಿಕ ಮತ್ತು ಮಾನಸಿಕ ಸಮತೋಲನದ ಸಂದೇಶ ಸಾರುತ್ತದೆ. ಇವೆಲ್ಲವನ್ನೂ ಅನುಭವಿಸುವುದೇ ರೋಮಾಂಚನ ಅನುಭವ. ಸ್ವಚ್ಛ, ನೈರ್ಮಲ್ಯದಿಂದ ಕೂಡಿರುವ ಕೊಡಗು ಇದೇ ರೀತಿ ಉಳಿದುಕೊಳ್ಳಬೇಕು. ಪತ್ರಕರ್ತರ ಒಡನಾಟ, ಒಗ್ಗಟ್ಟು, ಸಹಬಾಳ್ವೆಗೆ ಕ್ರೀಡಾಕೂಟ ಸಹಕಾರಿಯಾಗುತ್ತಿದೆ ಎಂದರು.
ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಭತ್ತ ಕೃಷಿಯಿಂದ ಆಹಾರ ಉತ್ಪಾದನೆಯೊಂದಿಗೆ ಅಂತರ್ಜಲ ವೃದ್ಧಿಯಾಗುವ ಮೂಲವಾಗಿದೆ. ಇದರಿಂದಾಗಿ ಭತ್ತ ಕೃಷಿಯಿಂದ ಯಾರೂ ಹಿಂದೆ ಸರಿಯಬಾರದು. ಗದ್ದೆಯಲ್ಲಿನ ಕೆಸರು ದೇಹದ ಆರೋಗ್ಯಕ್ಕೆ ಚೈತನ್ಯ ತರುತ್ತದೆ. ದೇಹದ ನಾನಾ ರೋಗಗಳಿಗೂ ರಾಮಬಾಣವಾಗಿದೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕೂಡ ನಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಆಯೋಜನೆಯಾಗಬೇಕಿದೆ ಎಂದರು.
ಗದ್ದೆಯಲ್ಲಿ ಭತ್ತ ಕೃಷಿಯೊಂದಿಗೆ ಮಿಶ್ರಬೆಳೆ ಬೆಳೆಯಲು ಉತ್ಸುಕತೆ ತೋರಬೇಕಿದೆ. ಕೆರೆಗಳ ಸಂರಕ್ಷಣೆಯಿಂದ ಭವಿಷ್ಯದಲ್ಲಿ ನೀರಿನ ಬವಣೆ ನೀಗಿಸಲು ಸಾಧ್ಯವಿದೆ. ನೀರು ಪೋಲಾಗದಂತೆ ಎಚ್ಚರವಹಿಸಲು ಉಳುಮೆ ಸಹಕಾರಿಯಾಗಿದೆ. ಸರ್ಕಾರ ಕೂಡ ಭತ್ತ ಬೆಳೆಯುವ ಕೃಷಿಕನಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ರೈತನಿಗೆ ಪ್ರಯೋಜನ ಇಲ್ಲದಂತಾಗಿದೆ. ರೈತರಿಗೆ ವಿಶೇಷವಾಗಿ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕಿದೆ ಎಂದು ಒತ್ತಾಯಿಸಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಸವಿತಾ ರೈ, ಪೊನ್ನಂಪೇಟೆ ತಾಲೂಕು ಪತ್ರಕರ್ತದ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು. ಉದ್ಯಮಿ ಬಿ.ಬಿ.ನಾಗರಾಜು ಬಹುಮಾನ ವಿತರಣೆ ಮಾಡಿದರು.
ಕ್ರೀಡಾಕೂಟ ಸಂಚಾಲಕ ಚಿಮ್ಮಣಮಾಡ ದರ್ಶನ್ ದೇವಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಅವಂಟಿ, ಉದ್ಯಮಿ ವಿಷ್ಣು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಟಿ.ಎನ್.ಮಂಜುನಾಥ್ ಬಹುಮಾನ ವಿತರಿಸಿದರು.
ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರ.ಕಾರ್ಯದರ್ಶಿ ಎನ್.ಎನ್.ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ.ಅರುಣ್‌ಕುಮಾರ್, ನಿರ್ದೇಶಕ ಸಿಂಗಿ ಸತೀಶ್ ಇದ್ದರು. ತೀರ್ಪುಗಾರರಾಗಿ ರಘು, ಮಹೇಶ್ ಕಾರ್ಯನಿರ್ವಹಿಸಿದರು.