ಕೆಸರೊಳ್ಳಿ ಶ್ರೀಲಕ್ಷ್ಮೀದೇವಿ ಜಾತ್ರೆ ಆರಂಭ

Published on

ಹಳಿಯಾಳ: ತಾಲೂಕಿನ ಕೆಸರೊಳ್ಳಿ ಗ್ರಾಮದ ಗ್ರಾಮದೇವತೆ ಶ್ರೀಲಕ್ಷ್ಮೀದೇವಿ ಜಾತ್ರೆಯು 7 ವರ್ಷಗಳ ಬಳಿಕ ಏ.1ರಿಂದ ಆರಂಭವಾಗಿದ್ದು, 15 ದಿನಗಳ ಕಾಲ ನಡೆಯಲಿದೆ. ಗ್ರಾಮದಲ್ಲಿ ಅಂದಾಜು ಒಂದೂವರೆ ಸಾವಿರ ಜನಸಂಖ್ಯೆ ಇದ್ದು, ಎಲ್ಲ ಸಮುದಾಯದವರು ಒಟ್ಟಾಗಿ ಜಾತ್ರೆ ಆಚರಿಸುವುದು ವಿಶೇಷವಾಗಿದೆ. ಗ್ರಾಮದಲ್ಲಿ ಬೃಹತ್ ಪೆಂಡಾಲ್ ಹಾಗೂ ಸ್ವಾಗತ ಕಮಾನು ಅಳವಡಿಸಲಾಗಿದೆ. ಜಾತ್ರೆಗೆ ಆಗಮಿಸುವ ಜನರಿಗಾಗಿ ವಿಶಾಲವಾದ ಪಾರ್ಕಿಂಗ್ ಹಾಗೂ ದೇವಿ ಪ್ರತಿಷ್ಠಾಪನೆಗಾಗಿ ಮೈದಾನ ಸಿದ್ಧಗೊಳಿಸಲಾಗಿದೆ. ಏ. 6ರಂದು ದೇವಿಯ ಮಾಂಗಲ್ಯಧಾರಣೆ, ಅಕ್ಷತಾರೋಪಣ, ಉಡಿ ತುಂಬುವುದು. 7ರಂದು ಗ್ರಾಮದಲ್ಲಿ ಶ್ರೀಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ, 8 ಮತ್ತು 9ರಂದು ಹೊನ್ನಾಟ ಮತ್ತು ಎರಡು ದಿನಗಳ ಕಾಲ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗಿರಿಜಾರಾಮ್ ಮಳಗಾಂವಕರ ಹಾಗೂ ಉಪಾಧ್ಯಕ್ಷ ವಿಠಲ ಕೇಸರೆಕರ ತಿಳಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಾತ್ರೆಯ ಸಮಯದಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಬಗ್ಗೆ ಶಾಸಕರ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮವಾಗಿಲ್ಲ. ಅಲ್ಲದೆ, ರಸ್ತೆಯೂ ಹದಗೆಟ್ಟಿದೆ. ಅಧಿಕಾರಿಗಳನ್ನು ಸಂಪರ್ಕಿಸಿ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net