ಕೆರೂಟಗಿ ತಾಂಡಾ ಸರ್ಕಾರಿ ಶಾಲೆ ಕೊಠಡಿ ಮೇಲ್ಛಾವಣಿ ಕುಸಿತ

dhp 20-melchavani
ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ತಾಂಡಾದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ಕೊಠಡಿ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿರುವುದು.
Published on

ದೇವರಹಿಪ್ಪರಗಿ: ತಾಲೂಕಿನ ಕೆರೂಟಗಿ ತಾಂಡಾದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿಯಾಗಿಲ್ಲ.

ತಾಂಡಾದಲ್ಲಿ ಒಂದನೇ ತರಗತಿಯಿಂದ 8ನೇ ತರಗತಿವರೆಗೆ ಒಟ್ಟು 240 ಮಕ್ಕಳು ಅಭ್ಯಸಿಸುತ್ತಿದ್ದು, ಶಾಲೆಯ 7ನೇ ತರಗತಿ ಕೊಠಡಿ ಮೇಲ್ಛಾವಣಿ ಮಳೆಯಿಂದಾಗಿ ನೆಲಕಚ್ಚಿದೆ.

ಈ ಕುರಿತು ಶಾಲೆ ಮುಖ್ಯಶಿಕ್ಷಕ ದೇವಜಿ ನಾಯಿಕ ಮಾತನಾಡಿ, ರಾತ್ರಿ ಸಮಯದಲ್ಲಿ ಈ ಘಟನೆ ಜರುಗಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ಹಗಲಿನಲ್ಲಿ ನಡೆದಿದ್ದರೆ ಖಂಡಿತವಾಗಿ ಏನಾದರೂ ಅನಾಹುತ ಆಗುತ್ತಿತ್ತು. ಏಕೆಂದರೆ ಸಾಕಷ್ಟು ಮಕ್ಕಳು ಶಾಲೆ ಆವರಣದಲ್ಲಿ ಆಟವಾಡುತ್ತಿದ್ದರು. ದೇವರು ದೊಡ್ಡವನು ಶಾಲೆಯ ರಜೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಒಂದು ವೇಳೆ ಶಾಲೆ ಆರಂಭಗೊಂಡ ನಂತರ ಮಳೆಗಾಲದಲ್ಲಿ ಈ ಘಟನೆ ನಡೆದಿದ್ದರೆ ನಮ್ಮ ಮಕ್ಕಳ ಹಾಗೂ ಶಿಕ್ಷಕರ ಸ್ಥಿತಿ ದೇವರೇ ಬಲ್ಲ ಎನ್ನುವಂತಾಗುತ್ತಿತ್ತು ಎಂದು ಭಯದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆಯ ಕೊಠಡಿ ಮೇಲ್ಚಾವಣಿ ಕುಸಿದ ಘಟನೆ ತಾಲೂಕಿನ ಇತರ ಶಾಲೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಬಿಇಒ ಹಾಗೂ ಶಿಕ್ಷಕರು ಮಳೆಗಾಲ ಆರಂಭಗೊಳ್ಳುವ ಮುನ್ನವೇ ಕೂಡಲೇ ತಮ್ಮ ಶಾಲೆಯಲ್ಲಿನ ಕೊಠಡಿಗಳನ್ನು ದುರಸ್ಥಿಗೊಳಿಸಲು ಮುಂದಾಗಬೇಕಿದೆ ಎಂದು ಕೆರೂಟಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂತೋಷ ರಾಠೋಡ, ತಾಂಡಾ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಆನಂದ ರಾಠೋಡ, ಆನಂದ ಚಟ್ಟರಕಿ, ಕಿರಣ ನಾಯಿಕ, ಬಾಬು ರಾಠೋಡ, ದೇಸು ರಾಠೋಡ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net