

ಸುಬ್ರಹ್ಮಣ್ಯ: ಎಡಮಂಗಲ ಗ್ರಾಮದ ಮುರುಳ್ಯದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ಪವಿತ್ರ ತೀರ್ಥಕೆರೆ ಮತ್ತು ತೀರ್ಥಬಾವಿ ಲೋಕಾರ್ಪಣೆಗೊಂಡಿತು. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ವಿಇವಿಧಾನಗಳು ನೆರವೇರಿದವು.
ಕೆರೆಯ ಸುತ್ತಲೂ ಹಣತೆ ದೀಪ ಬೆಳಗಿ ದೀಪೋತ್ಸವ ನೆರವೇರಿಸಲಾಯಿತು. ಋತ್ವಿಜರು ವೈಧಿಕ ವಿಧಿವಿಧಾನ ನಡೆಸಿ ಗಂಗಾಪೂಜೆ ನಡೆಯಿತು. ಗಂಗಾರತಿ ಬಳಿಕ ಗೋಪೂಜೆ ನೆರವೇರಿತು. ಒಡಿಯೂರಿನ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಗಂಗೆಗೆ ಪುಷ್ಪಾರ್ಚನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ ಪವಿತ್ರ ಗಂಗೆಗೆ ಪುಷ್ಪ ಸಮರ್ಪಣೆ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಗಂಗೆಗೆ ಕ್ಷೀರ ಸಮರ್ಪಣೆ ಮಾಡಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ., ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯಪ್ರಸನ್ನ, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ವಾಗ್ಮಿ ಹಾರಿಕಾ ಮಂಜುನಾಥ್, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪವಿತ್ರ ಪುಷ್ಕರಣಿ: ಶ್ರೀ ದೇವಳದ ಸಮೀಪ ಪವಿತ್ರವಾದ ತೀರ್ಥಕೆರೆಯ ಜಲದಲ್ಲಿ ಔಷಧೀಯ ಗುಣಗಳು ಇವೆ. ಈ ಪವಿತ್ರ ಪುಷ್ಕರಣಿಯಲ್ಲಿ ತೀರ್ಥಸ್ನಾನ ಮಾಡಿದರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ. ಇದೀಗ ಪವಿತ್ರವಾದ ತೀರ್ಥಕೆರೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಪವಿತ್ರ ಪುಷ್ಕರಣಿಯ ಅಡಿಭಾಗದಿಂದ 7 ಅಡಿ ಎತ್ತರದ ತನಕ ಶಿಲಾಮಯಗೊಳಿಸಲಾಗಿದೆ. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕೆರೆಗೆ 33 ಸಾವಿರ ಕೆಂಪುಕಲ್ಲನ್ನು ವಿನಿಯೋಗಿಸಲಾಗಿದೆ. ಸುಮಾರು 30 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಪುನರುತ್ಥಾನ ಮಾಡಲಾಗಿದೆ. ಪುಷ್ಕರಣಿಯ ಸುತ್ತ ಆವರಣ ಗೋಡೆ ನಿರ್ಮಾಣವಾಗಿದೆ. ಹೊರಭಾಗದಲ್ಲಿ ಸುತ್ತಲೂ ಉದ್ಯಾನವನ ಮತ್ತು ವಿದ್ಯುದ್ದೀಪಾಲಂಕಾರ ಮಾಡಿ ಆಕರ್ಷಕಗೊಳಿಸಲಾಗಿದೆ. ಇದರ ಪಕ್ಕದಲ್ಲಿರುವ ಪವಿತ್ರ ತೀರ್ಥ ಭಾವಿಯನ್ನು ಕೂಡ ಪುನಃನಿರ್ಮಿಸಲಾಗಿದೆ.