

ಸುಬ್ರಹ್ಮಣ್ಯ: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಮುರುಳ್ಯದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಜ.1ರಿಂದ 7ರತನಕ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 800 ವರ್ಷ ಇತಿಹಾಸ ಇರುವ ದೇವಸ್ಥಾನ ಇದಾಗಿದ್ದು, 2009ರಲ್ಲಿ ಈಗಿರುವ ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದಾಗ ಮಣ್ಣಿನ ಗೋಡೆ ಹೊಂದಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಚಿಂತನೆ ಮಾಡಿದೆವು. 2012ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತ್ತು. ಇದೀಗ 12 ವರ್ಷದ ಬಳಿಕ ನಮ್ಮದೇ ವ್ಯವಸ್ಥಾಪನಾ ಸಮಿತಿಗೆ ಬ್ರಹ್ಮಕಲಶೋತ್ಸವ ನೆರವೇರಿಸಲು ಶ್ರೀದೇವಿ ಅವಕಾಶ ನೀಡಿರುವುದು ಭಾಗ್ಯ ಎಂದರು.
2012ರಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಶ್ರೀ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು. ಆ ನಂತರ ಈ ಭಾಗದ ಸರ್ವರೂ ಮತ್ತು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ದುಡಿದ ಪ್ರತಿಯೊಬ್ಬರೂ ಅಭಿವೃದ್ಧಿ ಕಂಡಿದ್ದಾರೆ. ಕ್ಷೇತ್ರಕ್ಕೆ ಬಂದು ತಮ್ಮ ಅಭೀಷ್ಠೆ ಈಡೇರಿಸಲು ಪ್ರಾರ್ಥನೆ ಮಾಡಿದವರಿಗೆ ಶ್ರೀದೇವಿ ವರ ನೀಡಿದ್ದಾಳೆ. ವಿವಾಹ, ಕಂಕಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ಕೋರಿಕೆ ಈಡೇರಿದ ಅನೇಕ ಉದಾಹರಣೆಗಳು ಇಲ್ಲಿದೆ ಎಂದು ವಸಂತ ನಡುಬೈಲು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರೂಪರಾಜ ರೈ, ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಾಲಾಡಿ, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಪ್ರಮುಖರಾದ ಜಯಪ್ರಕಾಶ್ ಲೆಕ್ಕೆಸಿರಿಮಜಲು, ಧರ್ಮಪಾಲ ಅನಾವು, ನವೀನ್ ಕರೆಂಬಿಲ, ಸಚಿನ್ ಆರೆಂಬಿ, ಕಾರ್ತಿಕ್ ಕಲ್ಲೇರಿ, ದೀಪಕ್ ರೈ, ರಾಮಚಂದ್ರ ಪೂಜಾರಿ ನೂಜಾಡಿ, ಧೀರೇಶ್ ನಡುಬೈಲು, ಪುಷ್ಪಾವತಿ ಕರಿಂಬಿಲ, ತಾರನಾಥ ಕರಿಂಬಿಲ ಉಪಸ್ಥಿತರಿದ್ದರು.
ಈ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿ ದುಡಿದು ಬದುಕಿನಲ್ಲಿ ಉನ್ನತಿ ದೊರಕುತ್ತದೆ ಎನ್ನುವುದಕ್ಕೆ ನಾನು ಕೂಡ ನಿದರ್ಶನ. 12 ವರ್ಷದ ನಂತರ ಮತ್ತೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ. ಬ್ರಹ್ಮಕಲಶೋತ್ಸವ ಬಳಿಕ ಶ್ರೀ ದೇವಿಯ ಮಹಿಮೆ ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಹರಸುತ್ತಾಳೆ ಅನ್ನುವ ನಂಬಿಕೆ ನಮ್ಮದು. ಭಾಗೀರಥಿ ಮುರುಳ್ಯ, ಶಾಸಕಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ
ಪವಿತ್ರ ಪುಷ್ಕರಣಿ, ತೀರ್ಥ ಬಾವಿ ಲೋಕಾರ್ಪಣೆ
ಜೀರ್ಣೋದ್ಧಾರ, ಅಭಿವೃದ್ಧಿ ಕೆಲಸ ಮತ್ತು ಬ್ರಹ್ಮಕಲಶೋತ್ಸವ ಒಟ್ಟಾಗಿ 70 ಲಕ್ಷ ರೂ. ವೆಚ್ಚದಲ್ಲಿ ನೆರವೇರಲಿದೆ. 30 ಲಕ್ಷ ರೂ. ವೆಚ್ಚದಲ್ಲಿ ಪವಿತ್ರ ಪುಷ್ಕರಣಿ, ತೀರ್ಥ ಬಾವಿ ನಿರ್ಮಾಣಗೊಂಡು ಜ.3ರಂದು ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಕೆಯಾಗಲಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಭೋಜನ ಶಾಲೆ ನಿರ್ಮಿತವಾಗಲಿದೆ. 5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಪುನಃನಿರ್ಮಾಣವಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ ತಿಳಿಸಿದರು.