ಮಕ್ಕಳಿಗೆ ಅಗತ್ಯ ಧಾರ್ಮಿಕ ಜ್ಞಾನ : ಕೇರ್ಪಡ ದೇವಳದ ಧಾರ್ಮಿಕ ಸಭೆಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ಅಭಿಮತ

New Project
Published on

ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರದ ಮತ್ತು ಧಾರ್ಮಿಕ ಶಿಕ್ಷಣ ಅಗತ್ಯ. ಸುಸಂಸ್ಕೃತವಾದ ಜ್ಞಾನದಿಂದ ಬದುಕಿಗೆ ಉತ್ತಮ ಗುಣಗಳು ಪ್ರಾಪ್ತವಾಗುತ್ತವೆ. ಕೇರ್ಪಡದ ದೇವಾಲಯ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಒದಗುತ್ತಿರುವುದು ಶ್ಲಾಘನೀಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.

ಭಾರತೀಯ ಕುಟುಂಬ ಪದ್ಧತಿ ಮತ್ತು ಜಾಗೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದಲ್ಲಿ ಧಾರ್ಮಿಕ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ, ಸಂಘಟನೆಗೆ ಭಜನೆ ಉತ್ತಮ ಮಾರ್ಗ. ಭಜನೆಯ ಮೂಲಕ ಧರ್ಮ ಬೋಧನೆಯಾಗಬೇಕು. ಧರ್ಮ ಜಾಗೃತಿಯ ಮೂಲಕ ದೇಶದ ಜಾಗೃತಿಯಾಗಬೇಕು. ಕುಟುಂಬ ಮೌಲ್ಯಗಳ ಮೂಲಕ ಮನೆಯನ್ನೂ, ಸಮಾಜವನ್ನೂ, ದೇಶವನ್ನು ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞೆ ಡಾ.ಪದ್ಮಪ್ರಕಾಶ್, ಸುಳ್ಯ ತಹಸೀಲ್ದಾರ್ ಎಂ.ಮಂಜುಳಾ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯೆ ಇಂದಿರಾ ಬಿ.ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯ ಮೇಲ್ವಿಚಾರಕಿ ಹೇಮಲತಾ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಕೆ.ಜಿ.ಕುಸುಮಾತಿ ರೈ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ ಬಾಮೂಲೆ, ಎಡಮಂಗಲ ಗ್ರಾ.ಪಂ.ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಎಡಮಂಗಲ ಪಿಡಿಒ ಭವ್ಯಾ ಎಂ.ಬಿ. ಮುಖ್ಯಅತಿಥಿಗಳಾಗಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ಭಾಗ್ಯಪ್ರಸನ್ನ ಎಣ್ಮೂರು, ವಾರಿಜಾಕ್ಷಿ ಕೇರ್ಪಡ ಇದ್ದರು.

ಅಂಬಾರಿ ಕ್ರಿಯೇಷನ್‌ನ ಕೇರ್ಪಡದ ಅರಸಿ ಎಂಬ ತುಳು ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು. ತೃಷಾ ಪ್ರಾರ್ಥಿಸಿದರು. ಭಾಗ್ಯಪ್ರಸನ್ನ ಸ್ವಾಗತಿಸಿ, ದಿವ್ಯಾ ಯೋಗಾನಂದ ವಂದಿಸಿದರು. ಮಧು ಯತೀಶ್ ನಿರೂಪಿಸಿದರು.

ಅಂಕುರಪೂಜೆ, ಹೋಮ, ದೀಪಾರಾಧನೆ

ಶುಕ್ರವಾರ ಬೆಳಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವಶಾಂತಿ, ಶ್ವಾನಶಾಂತಿ, ಚೋರಶಾಂತಿ ಹೋಮಾದಿಗಳು ನಡೆದವು. ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ಪೆರ್ಲದ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ರಾತ್ರಿ ದೀಪಾರಾಧನೆ, ಅಂಕುರಪೂಜೆ, ಕುಂಭೇಶ ಕರ್ಕರೀಪೂಜೆ, ಅನುಜ್ಞಾ ಕಲಶ ಪೂಜೆ, ಪರಿಕಲಶಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಡ್ಯಾನ್ಸ್ ಬೀಟ್ಸ್ ಬೆಳ್ಳಾರೆಯ ಬೆಳ್ಳಾರೆ, ಪಂಜ, ಕೈಕಂಬ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಿತು. ಕಡಬದ ನೃತ್ಯ ನಿನಾದ ತಂಡದಿಂದ ನೃತ್ಯೋತ್ಸವ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net