ಹಿರೇಕೆರೆಯಲ್ಲಿ ಕೆರೆಗಂಗಮ್ಮ ಪೂಜೆ ವೈಭವ

NYK POOJE 07 (1)
Published on

ನಾಯಕನಹಟ್ಟಿ: ವಾದ್ಯಗಳು, ನಂದಿಕೋಲು, ನಂದಿಧ್ವಜಗಳ ಮೆರವಣಿಗೆ, ಸಿಂಗಾರಗೊಂಡ ದೇವರ ಗೂಳಿಯ ರಾಜ ಗಾಂಭೀರ್ಯ ನಡಿಗೆ ಮಧ್ಯೆ ಐತಿಹಾಸಿಕ ಹಿರೇಕೆರೆಯ ಗಂಗಾಪೂಜೆ ಗುರುವಾರ ಸಂಭ್ರಮದಿಂದ ನೆರವೇರಿತು.

ಗುರುವಾರ ಸಕಲಶಾಸ್ತ್ರ ಸಂಪ್ರದಾಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರು, ದೈವಸ್ಥರು, ಗ್ರಾಮಸ್ಥರು ಕೆರೆಗಂಗಮ್ಮನ ಪೂಜೆ ನಡೆಸಿದರು.

ತಿಪ್ಪೇರುದ್ರಸ್ವಾಮಿ ದೇವಾಲಯದ ಪಟ್ಟದ ಗೂಳಿಯನ್ನು ಅಲಂಕಾರಗೊಳಿಸಿ, ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ದೊಡ್ಡಕೆರೆಗೆ ಮೆರವಣಿಗೆಯಲ್ಲಿ ಭಕ್ತರು ಆಗಮಿಸಿದರು. ಕೆರೆಯ ಏರಿಯ ಮೇಲಿರುವ ಜೋಡಿ ಬಸವಣ್ಣನ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ನಡೆಸಿ, 108 ಕೊಡಗಳಿಂದ ಜಲಾಭಿಷೇಕ ನೆರವೇರಿಸಲಾಯಿತು.

ಮಳೆಯಿಲ್ಲದೆ ರೈತಾಪಿ ವರ್ಗ ತತ್ತರಿಸಿ ಹೋಗಿದೆ. ಅಂತರ್ಜಲ ಮಟ್ಟ ಕುಸಿದುಹೋಗಿದೆ. ಜನ, ಜಾನುವಾರುಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಸದಾ ನಮ್ಮನ್ನು ಕಾಪಾಡುವ ದೇವರುಗಳು ಕೃಪೆ ತೋರಬೇಕು. ಮಳೆ, ಬೆಳೆ ಚೆನ್ನಾಗಿ ಆಗುವ ರೀತಿ ಆಶೀರ್ವದಿಸಬೇಕು ಎಂದು ಪ್ರಾರ್ಥಿಸಿದರು.

ಸಜ್ಜೆ ಕಡುಬು, ಪಾಯಸ, ಅನ್ನಪ್ರಸಾದ ಭಕ್ತರಿಗೆ ವಿನಿಯೋಗಿಸಲಾಯಿತು. ಪಪಂ ಸದಸ್ಯರಾದ ಜೆ.ಆರ್.ರವಿಕುಮಾರ್, ವಿನುತಾ, ದೈವಸ್ಥರಾದ ಕೆ.ಎನ್.ತಿಪ್ಪೇರುದ್ರಪ್ಪ, ಬಿ.ಜಿ.ರಾಜಶೇಖರಪ್ಪ, ನಿಲುವಂಗಿ ತಿಪ್ಪೇಸ್ವಾಮಿ, ಗೌಡು ್ರರುದ್ರಯ್ಯ, ಮಹಾಂತೇಶ ದಿವಾಕರ, ಜೆ.ಪಿ.ರವಿಶಂಕರ್, ಆರ್.ಟಿ.ತಿಪ್ಪೇಸ್ವಾಮಿ, ದಳವಾಯಿ ರುದ್ರಮುನಿ, ಎಸ್.ಸತೀಶ್ ಇದ್ದರು.

ಐಮಂಗಲ ವರದಿ: ವರುಣನ ಕೃಪೆಗಾಗಿ ಹೋಬಳಿಯ ವದ್ಧಿಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆ.11ರ ಸೋಮವಾರ ಜಾನಮದ್ದಿಯ ರಾಜಣ್ಣ ಪೌರೋಹಿತ್ಯದಲ್ಲಿ ರುದ್ರಾಭಿಷೇಕ, ವರುಣ ಜಪ, ಹೋಮ, ವಿರಾಠ ಪರ್ವ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net