ಕೆರೆಬೇಟೆ ಸಿನಿಮಾ ಟ್ರೇಲರ್ ರಿಲೀಸ್

kerebere film traller release
ಕುವೆಂಪು ರಂಗಮಂದಿರದಲ್ಲಿ ಕೆರೆಬೇಟೆ ಸಿನಿಮಾದ ಟ್ರೇಲರ್ ಅನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ವೀಕ್ಷಿಸಿದರು. ನಿರ್ದೇಶಕ ರಾಜ್‌ಗುರು, ನಟ ಗೌರಿಶಂಕರ್, ನಟಿ ಬಿಂದು ಇತರರಿದ್ದರು.
Published on

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ರಾಜ್‌ಗುರು ನಿರ್ದೇಶಿಸಿ, ಗೌರಿಶಂಕರ್ ನಟಿಸಿರುವ ಕೆರೆಬೇಟೆ ಸಿನಿಮಾದ ಟ್ರೇಲರ್ ಅನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಮಲೆನಾಡಿನ ಸೊರಬ, ಸಿಗಂದೂರು ಭಾಗದಲ್ಲಿ ಚಿತ್ರೀಕರಣ ಆಗಿದೆ. ಟ್ರೇಲರ್ ಬಿಡುಗಡೆ ನೋಡಿದಾಗ ಚಿತ್ರ ಚೆನ್ನಾಗಿದೆ ಎಂದೆನಿಸುತ್ತಿದೆ. ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡಿನ ಶಿಕಾರಿ, ಕೆರೆಬೇಟೆ, ಹಸೆಗೋಡೆ ಇತ್ಯಾದಿ ಸಂಪ್ರದಾಯ ಮರೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜಾತಿ, ಅಂತಸ್ತು ಮರೆತು ಎಲ್ಲರೂ ಒಟ್ಟಾಗುತ್ತಿದ್ದರು. ಇವೆಲ್ಲ ಉತ್ಸಾಹದ ವಾತಾವರಣ ನಿರ್ಮಿಸುತ್ತಿದ್ದವು. ಗೌರಿಶಂಕರ್ ನಮ್ಮ ಕೋಣಂದೂರು ಹುಡುಗ. ನಾನೇ ಚಿತ್ರರಂಗಕ್ಕೆ ಲೆಟರ್ ಕೊಟ್ಟು ಕಳಿಸಿದ್ದೆ. ಈಗ ನಾಯಕನಾಗಿದ್ದಾರೆ ಎಂದು ಹೇಳಿದರು.
ನಿರ್ದೇಶಕ ರಾಜ್‌ಗುರು ಮಾತನಾಡಿ, ಮಲೆನಾಡಿನ ನಟರು, ತಂತ್ರಜ್ಞರೇ ಸೇರಿ ನಿರ್ಮಿಸಿರುವ ಕೆರೆಬೇಟೆ ಚಿತ್ರ ಮಾ.15ರಂದು ರಾಜ್ಯದ 125ರಿಂದ 150 ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಗೌರಿಶಂಕರ್ ನಾಯಕನಾಗಿ, ಬೆಂಗಳೂರಿನ ಬಿಂದು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿವಿಧ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಿಗಳು ಇಲ್ಲಿಯೂ ಕೆಲಸ ಮಾಡಿದ್ದಾರೆ. ಹಾಗಾಗಿ ಎಲ್ಲರೂ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ನಾಯಕ ನಟ ಗೌರಿಶಂಕರ್ ಮಾತನಾಡಿ, ಮಲೆನಾಡಿನ ಬದುಕು ಬೇರೆಯದೇ ಇದೆ. ಸಾಕಷ್ಟು ಜನರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮಾತ್ರ ನೋಡುತ್ತಾರೆ. ಇಲ್ಲಿ ಬದುಕಿನ ಹೋರಾಟ ಇದೆ. ಅದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಗಟ್ಟಿ ಕಥೆ ಇದೆ. ಹಾಗಾಗಿ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಸಹ ನಿರ್ದೇಶಕ ಶೇಖರ್, ಜೈಶಂಕರ್ ಪಾಟೀಲ್, ನಾಯಕಿ ಬಿಂದು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net