

ಮಂಡ್ಯ: ಸಣ್ಣ ಕೆಲಸವನ್ನು ದೊಡ್ಡದಾಗಿ ಬಿಂಬಿಸಿ, ಗೌರವ ಪಡೆದುಕೊಂಡಿದ್ದ ಕಾಮೇಗೌಡರ ಕೆರೆ ಕಾಳಜಿಯ ವಾಸ್ತವವನ್ನು ವಿಜಯವಾಣಿ ಬಹಿರಂಗಪಡಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ. ‘ಕಾಮೇಗೌಡರ ಸಾಧನೆ ಬಗ್ಗೆ ಈತನಕ ವರದಿ ಮಾಡಿದವರು, ಅವರಿಗೆ ಪ್ರಶಸ್ತಿ ನೀಡಿದವರು ಗ್ರಾಮದ ಯಾರೊಬ್ಬರ ಅಭಿಪ್ರಾಯವನ್ನೂ ಕೇಳಿರಲಿಲ್ಲ. ಹೊರಗಿನಿಂದ ತಮಗೆ ಬೇಕಾದವರನ್ನು ಕರೆತಂದು ಹೇಳಿಕೆ ಕೊಟ್ಟು ಕಳುಹಿಸುತ್ತಿದ್ದರು. ಅಧಿಕಾರಿಗಳೂ ನಮ್ಮನ್ನು ಕೇಳಲಿಲ್ಲ. ಆದರೆ, ‘ವಿಜಯವಾಣಿ’ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಅರಿತು, ಸತ್ಯ ಬಹಿರಂಗಪಡಿಸಿದ್ದರಿಂದ ನಮಗೆ ನ್ಯಾಯ ಸಿಗುವ ನಿರೀಕ್ಷೆ ಇದೆ’ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಗೌರವ ಸಿಕ್ಕ ನಂತರ ಕಾಮೇಗೌಡರ ವರಸೆ ಬದಲಾಯಿತು. ಪ್ರಧಾನಿಯವರು ಇವರ ಬಗ್ಗೆ ಮಾತನಾಡಿದ ಮೇಲಂತೂ ಗ್ರಾಮದ ಪ್ರತಿಯೊಬ್ಬರೂ ಭಯದಿಂದ ಬದುಕುವ ವಾತಾವರಣ ನಿರ್ವಣವಾಗಿತ್ತು. ನಿಂತರೂ, ಕುಂತರೂ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿಸುತ್ತಿದ್ದರು. ಜಿಲ್ಲಾಡಳಿತವೇ ಕಾಮೇಗೌಡರಿಗೆ ಸಲಾಂ ಹೊಡೆಯುವಂತಾಗಿತ್ತು. ಇದೀಗ ವಾಸ್ತವ ಬಹಿರಂಗಗೊಂಡಿದೆ ಎಂದು ಗ್ರಾಮಸ್ಥರು ಹರ್ಷಚಿತ್ತರಾಗಿದ್ದಾರೆ.
ತಪ್ಪು ಮಾಹಿತಿಗೆ ಕಿಡಿ: ಜಾಲತಾಣಗಳಲ್ಲಿ ಕಾಮೇಗೌಡರ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿದ ಬಹುತೇಕರು ಸ್ಥಳಕ್ಕೆ ಹೋಗಿ ಪರಿಶೀಲಿಸದೆ ವಾದ ಮಾಡುತ್ತಿರುವುದು ಗಮನಾರ್ಹ ಸಂಗತಿ. ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ನಲ್ಲಿ ಹೊಗಳಿದ ನಂತರ ಕಾಮೇಗೌಡರನ್ನು ಸನ್ಮಾನಿಸಿದ್ದ ಬಿಜೆಪಿ ಮುಖಂಡರು ಮುಜಗರಪಟ್ಟು ಕೊಳ್ಳುವಂತಾಗಿದೆ. ಅಧಿಕಾರಿಗಳ ತಪ್ಪಿನಿಂದ ಪ್ರಧಾನಿ ಮುಜುಗರಕ್ಕೆ ಈಡಾಗುವಂತಾಗಿದೆ ಎಂದು ಕೆಲವರು ಕಿಡಿಕಾರುತ್ತಿದ್ದಾರೆ.
ಬರಿದಾಗುತ್ತಿರುವ ಪುರಾತನ ಕೊಳ: ಕುಂದನ ಬೆಟ್ಟದಲ್ಲಿ ಇರುವ ನಾಲ್ಕಾರು ಕಟ್ಟೆ, ಹಲವು ಗುಂಡಿಗಳನ್ನೇ ಕೆರೆಗಳೆಂದು ಬಿಂಬಿಸಿ ಕಾಮೇಗೌಡರನ್ನು ಹಾಡಿ ಹೊಗಳುತ್ತಿರುವುದು ಆಶ್ಚರ್ಯಕರವಾಗಿದೆ. ಕಾಮೇಗೌಡರ ಎಡವಟ್ಟಿನಿಂದ ಬೆಟ್ಟದ ತಪ್ಪಲಿನಲ್ಲಿರುವ ಬರಗಾಲದಲ್ಲೂ ಬತ್ತದ ಪುರಾತನ ಕೊಳ ಬರಿದಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಕೊಳದ ಮೇಲೆ ಕಾಮೇಗೌಡರು ಜೆಸಿಬಿ ಮೂಲಕ ಕಟ್ಟೆ ಮಾಡಿಸಿದರು. ಇದರಿಂದಾಗಿ ಕೊಳದ ನೀರಿನ ಸಂಗ್ರಹ ಇಳಿಮುಖವಾಗುತ್ತಿದೆ. ಈ ಕೊಳದ ಸುತ್ತ ನೂರಾರು ವರ್ಷಗಳ ಮರಗಳಿವೆ. ಬೆಟ್ಟದಲ್ಲಿ ಇತ್ತೀಚೆಗೆ ನೆಟ್ಟು ಬೆಳೆಸಿರುವ ಯಾವುದೇ ಮರಗಳು ಇಲ್ಲ. ಆದರೂ ಕೆಲವರು ಕಾಮೇಗೌಡ ಮರಗಳನ್ನು ಬೆಳೆಸಿದ್ದಾರೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾಮೇಗೌಡರ ಸಾಧನೆ ಬೋಗಸ್. ಪ್ರಧಾನ ಮಂತ್ರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿ ಆಧಾರದ ಮೇಲಷ್ಟೇ ಪ್ರಧಾನಿ ಪ್ರಶಂಸಿಸಿದ್ದಾರೆ. ತಕ್ಷಣ ಜಿಲ್ಲಾಧಿಕಾರಿ ಸರ್ಕಾರಕ್ಕೆ ವಾಸ್ತವ ವರದಿ ನೀಡಬೇಕು. | ಡಾ.ಕೆ.ಅನ್ನದಾನಿ ಮಳವಳ್ಳಿ ಶಾಸಕ
ಪರ-ವಿರುದ್ಧ ಸಮರ
ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿ ಕೊಡುಗೆ ನೀಡಿರುವ ಹಲವರು ಕಾಮೇಗೌಡರ ಸಾಧನೆ ಬಗ್ಗೆ ಫೇಸ್ಬುಕ್ನಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಕೆರೆಗಳ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಅರಕೆರೆ ಪ್ರಸನ್ನ ಎನ್.ಗೌಡ, ವಿವಿಧ ರೀತಿಯ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎಂ.ಬಿ.ನಾಗಣ್ಣಗೌಡ, ನ.ಲಿ.ಕೃಷ್ಣ, ಸೂನಗಹಳ್ಳಿ ರಾಜು ಸೇರಿ ಹಲವರು ಪರವಾಗಿ ಧ್ವನಿ ಎತ್ತಿದ್ದಾರೆ. ಮತ್ತೊಂದೆಡೆ ಸಿಪಿಐಎಂ ಮುಖಂಡ ಟಿ.ಎಲ್.ಕೃಷ್ಣೇಗೌಡ ಸೇರಿ ಹಲವರು ಕಾಮೇಗೌಡ ಕೆರೆ ಕಟ್ಟಿದ್ದಾರೆ ಎಂದು ಹೇಳುತ್ತಿರುವುದೇ ಬೋಗಸ್. ಅಲ್ಲಿ ಕೆರೆಗಳಿಲ್ಲ, ಕೆಲವು ಕಟ್ಟೆಗಳಿವೆ. ಈ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದೆ ದೊಡ್ಡ ದೊಡ್ಡ ಬುದ್ಧಿವಂತರು ಮಾತನಾಡುತ್ತಿದ್ದಾರೆ ಎಂದು ಕುಹಕವಾಡಿದ್ದಾರೆ.