ಕೆರೆ ಅಭಿವೃದ್ಧಿಗೆ ಅನುದಾನ ಅಗತ್ಯ, ಜಿಪಂ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ ಒತ್ತಾಯ, ಸಕ್ಕರೆಗೊಲ್ಲಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

cb9be59f-b962-4dbb-973d-b6d22949e673
Published on

ಬೆಂಗಳೂರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಸರ್ಕಾರ ಈ ಬಗ್ಗೆ ಒತ್ತು ನೀಡಿ ಕೆರೆ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಸಕ್ಕರೆಗೊಲ್ಲಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಕ್ಕರೆಗೊಲ್ಲಹಳ್ಳಿ ಕೆರೆ ಸುಮಾರು 85 ಎಕರೆಯಷ್ಟು ವಿಶಾಲವಾಗಿದೆ. ಇದಕ್ಕೆ 3.72 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಿಂದ ಕೆರೆ ಅಭಿವೃದ್ಧಿ ಕಷ್ಟಸಾಧ್ಯವಾಗಿದೆ. ಕೆರೆ ಸರ್ವೇ ನಡೆಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿದರೆ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಕೆರೆ ತಕ್ಷಣಕ್ಕೆ ನೋಡಿದರೆ ಕೆರೆ ಕುರುಹೇ ಕಾಣದಂತಿದೆ. ಅಪಾರ ಪ್ರಮಾಣದಲ್ಲಿ ಕೆರೆ ಹೂಳು ಮುಚ್ಚಿಕೊಂಡಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಸಾಕಷ್ಟು ತೊಂದರೆ ಇದೆ. ಅಂತರ್ಜಲ ಪಾತಾಳ ಮುಟ್ಟಿದೆ. ಕೆರೆಗಳ ಅಭಿವೃದ್ಧಿಯಾಗದ ಹೊರತು ಅಂತರ್ಜಲ ವೃದ್ಧಿ ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕಿದೆ ಎಂದು ಒತ್ತಾಯಿಸಿದರು.

ಒತ್ತುವರಿ ತೆರವುಗೊಳಿಸಬೇಕು: ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ಮೊದಲು ಕೆರೆಗಳನ್ನು ಸರ್ವೇ ಮಾಡಿ ಒತ್ತುವರಿ ಜಾಗ ತೆರವುಗೊಳಿಸಬೇಕಿದೆ. ಕೆರೆಯಲ್ಲಿ ಹೂಳು ತೆಗೆಯುವುದರ ಜತೆಗೆ ಮಳೆ ನೀರು ಹರಿಯುವಂತೆ ಕ್ರಮಕೈಗೊಳ್ಳಬೇಕಿದೆ. ಕೆರೆ ಅಭಿವೃದ್ಧಿಯಲ್ಲಿ ಜಿಲ್ಲಾ ಪಂಚಾಯಿತಿಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಯಮ್ಮ ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಶಶಿಧರ್, ಗ್ರಾಪಂ ಮಾಜಿ ಅಧ್ಯಕ್ಷ ವೀರಕ್ಯಾತರಾಯಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯಾ ಮತ್ತಿತರರು ಇದ್ದರು.

ಕೆರೆ ಬಳಕೆದಾರರ ಸಂಘ: ಕೆರೆ ಅಭಿವೃದ್ಧಿಗೆ ಕೆರೆ ಬಳಕೆದಾರರ ಸಂಘದ ಸದಸ್ಯರ ಸಹಕಾರ ಪಡೆಯಲಾಗಿದೆ. ಕೆರೆ ಹೂಳನ್ನು ಸಾಗಿಸಲು ಒಂದು ಟ್ಯಾಕ್ಟರ್ ಲೋಡ್‌ಗೆ 25 ರೂ. ಪಡೆಯಲಾಗುತ್ತಿದ್ದು. ಸಂಗ್ರಹವಾದ ಹಣವನ್ನು ಕೆರೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯ ಹೇಳಿದರು. ಪ್ರಾಯೋಗಿಕವಾಗಿ ಸಕ್ಕರೆಗೊಲ್ಲಹಳ್ಳಿ ಕೆರೆ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಹಂತಹಂತವಾಗಿ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ರೂಪುರೇಷೆ ಸಿದ್ದಪಡಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net