

ತುಮಕೂರು : ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಬಳಿಕ ಹೆಬ್ಬೂರು ಅಮಾನಿಕೆರೆ ಕೆರೆ ಅಂಗಳದಲ್ಲಿ ಮತ್ತೆ ಭೂಗಳ್ಳರು ಸದ್ದು ಮಾಡಲಾರಂಭಿಸಿದ್ದಾರೆ. ಕೆರೆ ಭೂಮಿ ಕಬಳಿಸಿ ರಸ್ತೆ, ಪಾರ್ಕ್ ನಿರ್ಮಾಣ ಕೈಗೆತ್ತಿಕೊಂಡಿದ್ದರೂ ತಾಲೂಕು ಆಡಳಿತ ಮೌನವಹಿಸಿರುವುದು ಹಲವು ಗುಮಾನಿಗೆ ಕಾರಣವಾಗಿದೆ.
ಹೆಬ್ಬೂರು ಅಮಾನಿಕೆರೆ ಕೆರೆಯ ಪೂರ್ವ, ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿರುವಂತೆ ಲೇಔಟ್ ನಿರ್ಮಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಕೆರೆ ಜಾಗವನ್ನು ಒತ್ತುವರಿ ಮಾಡಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ಕೆರೆ ಒತ್ತುವರಿ ಪ್ರಕರಣವು ಸಿಎಂ, ಕಂದಾಯ ಸಚಿವರ ಗಮನಕ್ಕೆ ಹೋದ ಹಿನ್ನೆಲೆಯಲ್ಲಿ ಮೌನವಹಿಸಿದ್ದ ಭೂಗಳ್ಳರು ಹೊಸದಾಗಿ ಗ್ರಾಪಂ ರಚನೆಯಾದ ಬಳಿಕ ಕೆರೆ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.
2019ರಲ್ಲೇ ಸಿಎಂಗೆ ದೂರು: ಲೇಔಟ್ ನಿರ್ಮಾಣಕ್ಕೆಂದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಈ ಅಕ್ರಮದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಒತ್ತುವರಿ ತೆರವುಗೊಳಿಸಿ ಕೆರೆ ಜಾಗ ಉಳಿಸುವಂತೆ ಕೋರಿ 2019ರ ಡಿಸೆಂಬರ್‌ನಲ್ಲೇ ಜೆಡಿಎಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷ, ಬೆಳಗುಂಬ ಗ್ರಾಪಂ ಮಾಜಿ ಸದಸ್ಯ ಬಿ.ಎಸ್.ವೆಂಕಟೇಶ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್‌ಗೆ ಮೊರೆ ಹೋಗಿದ್ದರು. ಈ ಸಂಬಂಧ ಪ್ರಾದೇಶಿಕ ಆಯುಕ್ತರು, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕೆರೆ ಒತ್ತುವರಿ ಪರಿಶೀಲಿಸಿ ನಿಯಮಾನುಸಾರ ಭೂಗಳ್ಳರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಅಧಿನಿಯಮ 1964ರ ಕಲಂ 192(ಎ)ರಡಿಯಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸೂಚನೆ ಸಹ ನೀಡಿದ್ದರು. ಆದರೆ, ಆಯುಕ್ತರ ಪತ್ರಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳ್ಯಾರೂ ಕಿಂಚಿತ್ತೂ ಗೌರವ ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳಾಗಲಿ, ತಹಸೀಲ್ದಾರ್ ಆಗಲಿ, ಕಂದಾಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಮೇಲಧಿಕಾರಿಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಹಸೀಲ್ದಾರ್ ಒಮ್ಮೆ ಕೆರೆ ಅಂಗಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ಈವರೆಗೆ ಕೆರೆ ಒತ್ತುವರಿ ಆಗಿರುವ ಬಗ್ಗೆ ವರದಿ ನೀಡದೆ ಇರುವುದು ರಾಜಕೀಯ ಪ್ರಭಾವಕ್ಕೆ ಸಿಲುಕಿರುವುದು ಸ್ಪಷ್ಟವೆನಿಸಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರದ ಆಸ್ತಿಯನ್ನು ರಕ್ಷಿಸಲು ಈಗಲಾದರೂ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಿ ಕೆರೆಯನ್ನು ಭೂಗಳ್ಳರಿಂದ ರಕ್ಷಿಸಬೇಕು ಎನ್ನುತ್ತಾರೆ ಬಿ.ಎಸ್.ವೆಂಕಟೇಶ್.
ಹೆಬ್ಬೂರು ಅಮಾನಿಕೆರೆ ಪೂರ್ವ, ಪಶ್ಚಿಮ ಭಾಗದಲ್ಲಿ ಕೆರೆ ಒತ್ತುವರಿ ಮಾಡಿ ರಸ್ತೆ, ಪಾರ್ಕ್ ನಿರ್ಮಿಸಲಾಗಿದೆ. ಸಿಎಂ, ಕಂದಾಯ ಸಚಿವರಿಗೆ ಈ ಹಿಂದೆ ದೂರು ನೀಡಿದ್ದು ಈವರೆಗೆ ಸುಮ್ಮನಿದ್ದ ಭೂಗಳ್ಳರು ಈಗ ಗ್ರಾಪಂ ರಚನೆ ಆದ ಬಳಿಕ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಅಧಿಕಾರಿಗಳ್ಯಾರೂ ಕೆರೆ ಸಂರಕ್ಷಣೆ ಬಗ್ಗೆ ಗಮನ ಹರಿಸಿಲ್ಲ. ಕೆರೆ ಸಂರಕ್ಷಣೆಗೆ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ.
ಬೆಳಗುಂಬ ವೆಂಕಟೇಶ್
ಅಧ್ಯಕ್ಷ, ಜೆಡಿಎಸ್ ತಾಲೂಕು ಎಸ್ಸಿ ಘಟಕ
ಹೆಬ್ಬೂರು ಕೆರೆ ಅಮಾನಿಕೆರೆ ಒತ್ತುವರಿ ಬಗ್ಗೆ ತಕ್ಷಣವೇ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಜಿಪಂ ವ್ಯಾಪ್ತಿಗೆ ಬರುತ್ತದೆ. ಕೆರೆ ಒತ್ತುವರಿಗೆ ಸಾಥ್ ನೀಡಿರುವ ಅಧಿಕಾರಿಗಳು ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.
ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ