

ಮಂಗಳೂರು: ತಮ್ಮ ಗಡಿಯೊಳಗೆ ನುಸುಳಿ ಮೀನುಗಾರಿಕೆ ನಡೆಸುತ್ತಿರುವ ಆಪಾದನೆ ಜತೆಗೆ ತಮ್ಮ ಪೊಲೀಸರನ್ನೇ ಅಪಹರಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮಂಗಳೂರಿನ ಮೀನುಗಾರರ ಮೇಲೆ ಕೇರಳ ಪೊಲೀಸರು ಹೊರಿಸಿದ್ದಾರೆ.
ಆಳಸಮುದ್ರ ಮೀನುಗಾರಿಕೆ ನಡೆಸಿ ಹಿಂದಿರುಗುವಾಗ ಮಂಜೇಶ್ವರ ಮೂಲಕ ಬರಬೇಕಾಗುತ್ತದೆ, ಆಗ ಕೆಲವೊಮ್ಮೆ ಗಡಿಯಲ್ಲೇ ಬರುವುದಿದೆ, ಆದರೆ ಅದನ್ನೇ ಉಲ್ಲಂಘನೆ ಎಂದುಕೊಂಡು ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಮಂಗಳೂರಿನ ಮೀನುಗಾರರು ಹೇಳುತ್ತಾರೆ.
ಮಂಗಳೂರಿನ ಬೋಳೂರು ಚಂದ್ರಹಾಸ್ ಎಂಬವರಿಗೆ ಸೇರಿದ ಪರ್ಸಿನ್ ದೋಣಿ ಮಂಜೇಶ್ವರ ಬಳಿ ಸೋಮವಾರ ಬರುತ್ತಿದ್ದಾಗ ಕಾಸರಗೋಡಿನ ಕೋಸ್ಟಲ್ ಪೊಲೀಸ್‌ನ ಇಬ್ಬರು ಸಿಬ್ಬಂದಿ ಬೋಟ್‌ಗೆ ಬಂದು ಮಂಜೇಶ್ವರ ದಕ್ಕೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಮೀನುಗಾರರ ಪ್ರಕಾರ ಅಲ್ಲಿಗೆ ಕೊಂಡೊಯ್ದರೆ ದೊಡ್ಡ ಮೊತ್ತದ ಪೆನಾಲ್ಟಿ ತೆರಬೇಕಾಗುತ್ತದೆ. ಅಲ್ಲದೆ, ಅಲ್ಲಿ ಆಳ ಕಡಿಮೆ ಇರುವ ಕಾರಣ ಕೊಂಡೊಯ್ಯಲಾಗುತ್ತಿಲ್ಲ ಎಂದು ಮೀನುಗಾರರು ಇಬ್ಬರು ಪೊಲೀಸರೊಂದಿಗೆ ಮಂಗಳೂರು ಬಂದರಿಗೆ ತಂದು ಬಿಟ್ಟಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಪೊಲೀಸರು ಮೀನುಗಾರರ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರ ಮುಖಂಡರು ಇದನ್ನು ಕಾಸರಗೋಡು ಎಸ್ಪಿಯವರಲ್ಲಿ ಚರ್ಚಿಸಿದ್ದು, ಅವರೂ ಈ ಪ್ರಕರಣ ತನ್ನ ಕೈಲಿಲ್ಲ, ಡಿಜಿಪಿಯವರಲ್ಲಿಗೂ ತಲುಪಿದ್ದರಿಂದ ಏನೂ ಮಾಡಲಾಗದು ಎಂದು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಹಾಗೂ ಕರ್ನಾಟಕ ಕೋಸ್ಟಲ್ ಪೊಲೀಸ್‌ಗೆ ಕೇರಳ ಪೊಲೀಸರು ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ತಟರಕ್ಷಣಾ ಪಡೆ ಪೊಲೀಸರ ವಾದವೇನು?
ಮಂಜೇಶ್ವರ: ಕರಾವಳಿ ತಟರಕ್ಷಣಾ ಪಡೆಯ ಎಸ್‌ಐ ಕೆ.ವಿ.ರಾಜೀವ್ ಕುಮಾರ್ ನೇತೃತ್ವದ ತಂಡ ಮಂಜೇಶ್ವರ ಕಿರುಬಂದರು ಸಮೀಪ ಸಮುದ್ರದಲ್ಲಿ 12 ಜನರಿದ್ದ ಕರ್ನಾಟಕದ ದೋಣಿಯನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿತು. ದಾಖಲೆಗಳಲ್ಲಿ ಕೆಲವು ಅನುಮಾನಗಳಿದ್ದುದರಿಂದ ದೋಣಿಯನ್ನು ವಶಕ್ಕೆ ಪಡೆದರು. ಬಳಿಕ ನಾಗರಿಕ ಪೊಲೀಸ್ ಅಧಿಕಾರಿಗಳಾದ ರಘು ಮತ್ತು ಸುಧೀಶ್ ಅವರನ್ನು ಮಂಜೇಶ್ವರದಿಂದ ಶಿರಿಯಾದ ಕರಾವಳಿ ನಿಲ್ದಾಣಕ್ಕೆ ಕರೆದೊಯ್ಯುವಂತೆ ದೋಣಿ ಚಾಲಕನಿಗೆ ಸೂಚಿಸಿದ್ದು, ಎಸ್‌ಐ ಮತ್ತು ಅವರ ತಂಡ ಇನ್ನೊಂದು ದೋಣಿಯಲ್ಲಿ ತೆರಳಿದ್ದರು. ಆದರೆ ದೋಣಿ ಶಿರಿಯಾ ತಲುಪಿರಲಿಲ್ಲ. ದೂರವಾಣಿಯಲ್ಲಿ ಸಂಪರ್ಕಿಸಿದಾಗ ದೋಣಿ ಮಂಗಳೂರಿನತ್ತ ಸಂಚರಿಸುತ್ತಿದೆ ಎಂದು ಮಾಹಿತಿ ಲಭಿಸಿತು. ಒಂದು ಗಂಟೆ ನಂತರ, ದೋಣಿ ಮಂಗಳೂರು ಬಂದರನ್ನು ತಲುಪಿರುವುದು ದೃಢಪಡಿಸಲಾಯಿತು. ಬಳಿಕ ಕಾಸರಗೋಡು ಜಿಲ್ಲಾ ಪೊಲೀಸರ ನಿರ್ದೇಶನದಂತೆ ಕರಾವಳಿ ತಟ ರಕ್ಷಣಾ ಪಡೆಯ ಅಧಿಕಾರಿಗಳು ಮಂಗಳೂರಿಗೆ ತೆರಳಿ ಪೊಲೀಸರನ್ನು ಕರೆತಂದಿದ್ದಾರೆ. ಈ ಸಂಬಂಧ 12 ಮಂದಿ ಮೇಲೆ ದೂರು ದಾಖಲಿಸಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಪಹರಣಕ್ಕೊಳಗಾದ ಪೊಲೀಸರಿಂದ ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಲಾಗಿದೆ. ಮುಂದೆ ಈ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು.
ಡಿ.ಶಿಲ್ಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾಸರಗೋಡು