ಲೈಫ್‌ಮಿಶನ್ ಹಗರಣ ತನಿಖೆಗೆ ಕೇರಳ ಹೈಕೋರ್ಟ್ ಹಸಿರು ನಿಶಾನೆ

kearal high court
Published on

ಕಾಸರಗೋಡು: ಕೇರಳ ಸರ್ಕಾರದ ವಸತಿ ನಿರ್ಮಾಣ ಯೋಜನೆ ಲೈಫ್ ಮಿಷನ್ ಭ್ರಷ್ಟಾಚಾರದ ವಿರುದ್ಧ ಸಿಬಿಐ ತನಿಖೆ ಮುಂದುವರಿಸಲು ಕೇರಳ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಲೈಫ್ ಮಿಶನ್ ವಿರುದ್ಧ ಸಿಬಿಐ ತನಿಖೆ ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಬಗ್ಗೆ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ಮುಂದಾಗದಿರುವುದು ಸರ್ಕಾರಕ್ಕೆ ಮುಖಭಂಗವಾಗಿದೆ.

ಸರ್ಕಾರದ ಪರವಾಗಿ ಲೈಫ್‌ಮಿಶನ್ ಸಿಇಒ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜ.ವಿ.ಜಿ. ಅರುಣ್ ನೇತೃತ್ವದ ಪೀಠ ಅರ್ಜಿ ಪರಿಗಣಿಸುತ್ತಿದ್ದು, ವಿಚಾರಣೆ ಅ.8ಕ್ಕೆ ಮುಂದೂಡಲಾಗಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾನೂನು (ಎಫ್‌ಸಿಆರ್‌ಎ) ಪ್ರಕಾರ ಕಾನೂನು ಉಲ್ಲಂಘನೆಯಾಗಿರುವುದನ್ನು ಸಿಬಿಐ ತನಿಖೆಯಿಂದ ಪತ್ತೆ ಹಚ್ಚಲಿದೆ. ಕಾನೂನು ಪ್ರಕಾರ ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕೇಂದ್ರದ ಅನುಮತಿಯಿಲ್ಲದೆ ಪಡೆದಲ್ಲಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ಲೈಫ್ ಮಿಶನ್‌ನ 20.5 ಕೋಟಿ ರೂ. ಮೊತ್ತದ ಒಟ್ಟು ಯೋಜನೆಯಲ್ಲಿ ಒಂಬತ್ತು ಕೋಟಿ ರೂ.ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ, ಸ್ಥಳೀಯಾಡಳಿತ ಖಾತೆ ಸಚಿವ, ಲೈಫ್ ಮಿಶನ್ ಹಾಲಿ ಸಿಇಒ, ಮಾಜಿ ಸಿಇಒ, ಚಿನ್ನ ಅಕ್ರಮ ಸಾಗಾಟ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್, ಸರಿತಾ, ಸಂದೀಪ್, ಯುನಿಟೆಕ್ ಎಂ.ಡಿ. ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಶಾಸಕ ಅನಿಲ್ ಅಕ್ಕರ ಸಿಬಿಐಗೆ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net