ಗಡಿ ದಾಟಲು ಬೇಕಿಲ್ಲ ಆ್ಯಂಟಿಜೆನ್ ಪರೀಕ್ಷೆ: ಕಾಸರಗೋಡು ಡಿಸಿ ಮಾಹಿತಿ

thalapady new
Published on

ಮಂಗಳೂರು/ಮಂಜೇಶ್ವರ: ದೈನಂದಿನ ತುರ್ತು ಅಗತ್ಯಗಳಿಗೆ ಕಾಸರಗೋಡು ಜಿಲ್ಲೆಯ ಜನರು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ವಾಪಸಾಗುವುದಿದ್ದರೆ ಇನ್ನು ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಗಡಿ ನಿರ್ಬಂಧ ತೆರವಿಗೆ ಕೇರಳ ಹೈಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಕಂದಾಯ ಸಚಿವ ಇ.ಚಂದ್ರಶೇಖರನ್ ನೀಡಿರುವ ನಿರ್ದೇಶನದಂತೆ ಶುಕ್ರವಾರ ಜರುಗಿದ ತುರ್ತು ಸಭೆಯ ಬಳಿಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಈ ನಿರ್ಧಾರ ಪ್ರಕಟಿಸಿದ್ದಾರೆ.

ಈ ನಿರ್ಬಂಧ ಸಡಿಲಿಕೆ ಚಿಕಿತ್ಸೆ, ವ್ಯಾಪಾರ ಸಹಿತ ತುರ್ತು ಅಗತ್ಯಗಳಿಗೆ ಒಂದು ದಿನ ಪ್ರಯಾಣಿಸಿ ಅದೇ ದಿನ ವಾಪಸಾಗುವವರಿಗೆ ಮಾತ್ರ ಅನ್ವಯ. ದಿನಂಪ್ರತಿ ಅಂತಾರಾಜ್ಯ ಪ್ರಯಾಣ ಮಾಡುವವರು ಮತ್ತು ಹೊರ ರಾಜ್ಯದವರಿಗೆ ಆ್ಯಂಟಿಜೆನ್ ಟೆಸ್ಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ತಲಪಾಡಿಯಲ್ಲಿ ಲಾಠಿ ಪ್ರಹಾರ: ಕೋರ್ಟ್ ಆದೇಶ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನಗಳಿದ್ದರೂ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳಲು ಅಡ್ಡಿಪಡಿಸಿದ ಪೊಲೀಸರ ಕ್ರಮವನ್ನು ವಿಚಾರಿಸಲು ಹೋದ ಬಿಜೆಪಿ ಕಾರ್ಯಕರ್ತರ ಮೇಲೆ ಕೇರಳ ಪೊಲೀಸರು ಶುಕ್ರವಾರ ಸಂಜೆ ಲಾಠಿ ಪ್ರಹಾರ ಮಾಡಿದ್ದಾರೆ. ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಗ್ರಾಮಸ್ಥರ ಸಂಚಾರಕ್ಕೆ ಚೆಕ್‌ಪೋಸ್ಟ್ ಮುಕ್ತ

ಬೆಂಗಳೂರು: ಮಂಜೇಶ್ವರ ತಾಲೂಕಿನ ಸಾಯಾ, ಚಾವರ್ಕಾಡು ಗ್ರಾಮಸ್ಥರು ಕೇರಳದ ಪೆರ್ಲ ಪಟ್ಟಣ ಹಾಗೂ ಕರ್ನಾಟಕದ ಬಂಟ್ವಾಳ ತಾಲೂಕಿಗೆ ಸಾರಡ್ಕ ಚೆಕ್‌ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.

ಸಾರಡ್ಕ ಚೆಕ್‌ಪೋಸ್ಟ್ ಮೂಲಕ ಸಂಚರಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದು, ಗ್ರಾಮಸ್ಥರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಂಜೇಶ್ವರ ತಾಲೂಕಿನ ಜೆ.ಎಸ್.ರಾಧಾಕೃಷ್ಣ ನಾಯಕ್ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಅನ್ನು ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅಂತಾರಾಜ್ಯ ಸಂಚಾರ ಸಂಬಂಧ ಹೊರಡಿಸಿದ್ದ ಎಸ್‌ಒಪಿ ಪರಿಷ್ಕರಿಸಲಾಗಿದೆ. ಈಗ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ಅರ್ಜಿ ವಿಲೇವಾರಿ ಮಾಡಿ ಆದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net