ದೇಶದಲ್ಲಿ ಪ್ರಥಮ ಬಾರಿಗೆ ಇಂಗಾಲ ಮುಕ್ತ ಕೃಷಿ ಪದ್ಧತಿ ಪರಿಚಯಿಸಿದ ಕೇರಳ

kisan swaraj sammelan
Published on

ಮೈಸೂರು: ದೇಶದಲ್ಲೇ ಮೊದಲ ಬಾರಿಗೆ ಇಂಗಾಲ ಮುಕ್ತ (ಕಾರ್ಬನ್ ನ್ಯೂಟ್ರಲ್) ಕೃಷಿ ಪದ್ಧತಿಯನ್ನು ಕೇರಳದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಎಂದು ಕೇರಳ ಕೃಷಿ ಸಚಿವ ಪಿ. ಪ್ರಸಾದ್ ಹೇಳಿದರು.

ಸುಸ್ಥಿರ ಸಮಗ್ರ ಕೃಷಿಗಾಗಿ ಮೈತ್ರಿ ಸಂಸ್ಥೆ (ಆಶ) ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ (ನ.13ರವರೆಗೆ) ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡಿ, ಜಾಗತಿಕ ಹವಾಮಾನ ವೈಪರೀತ್ಯ ಮತ್ತು ತಾಪಮಾನ ಏರಿಕೆ ತಡೆಗೆ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕೇರಳ ಪರಿಣಾಮಕಾರಿಯಾಗಿ ಹೆಜ್ಜೆ ಇರಿಸುತ್ತಿದೆ ಎಂದು ಹೇಳಿದರು.

ಕೃಷಿ ಉತ್ಪನ್ನ ವಲಯದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ಭಾರತ, ಚೀನಾ, ಇಂಡಿಯಾ, ಇಂಡೋನೇಷ್ಯಾ, ಅಮೆರಿಕ ಹಾಗೂ ಬ್ರೆಜಿಲ್ನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.

ಕೋವಿಡ್ ನಂತರ ಆಹಾರ ಸ್ವಾವಲಂಬನೆಗೆ ಕೇರಳ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಿದೆ. ಭತ್ತ, ತರಕಾರಿ, ಮೊಟ್ಟೆ, ಮತ್ಸೃ ಹಾಗೂ ಹಾಲಿನ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದುವ ಗುರಿ ಹೊಂದಿದ್ದು, ಇದಕ್ಕೆ ಅವಶ್ಯಕವಾದ ಉತ್ತೇಜನವನ್ನು ಸರ್ಕಾರ ನೀಡುತ್ತಿದೆ. ಕೇರಳ ಸರ್ಕಾರ ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಹೇಳಿದರು.

ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರೈತರ ಹಿತರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರೆ ದೇಶ ಸಮೃದ್ಧಿಯಿಂದ ಕೂಡಿರುತ್ತದೆ. ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಣೆ ಮಾಡಬೇಕು. ಇದು ಕೇವಲ ರೈತರ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬರ ಜವಾಬ್ದಾರಿ ಕೂಡ ಆಗಿದೆ. ಹವಾಮಾನ ವೈಪರೀತ್ಯದಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನ ನಡೆಸಬೇಕು ಎಂದರು.

ನಗರ ಹಾಗೂ ಹಳ್ಳಿಗಳ ನಡುವೆ ಸಂಪರ್ಕ ಏರ್ಪಡಬೇಕಾಗಿದೆ. ಹಳ್ಳಿಯಲ್ಲಿರುವ ರೈತರಿಗೋಸ್ಕರ ಯೋಜನೆ ರೂಪುಗೊಳ್ಳುವುದು ನಗರದಲ್ಲಿ. ಹಾಗಾಗಿ ನಗರದ ಜನರಿಗೆ ಹಳ್ಳಿಯ ಮಾಹಿತಿ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಬೀಜ ಸಂರಕ್ಷಕಿ ಪಾಪಮ್ಮ, ಕೃಷಿ ವಿಜ್ಞಾನಿ ಎ.ಆರ್.ವಾಸವಿ, ಸಮ್ಮೇಳನದ ಸ್ವಾಗತ ಸದಸ್ಯ ಕೃಷ್ಣಪ್ರಸಾದ್, ಪರಿಸರ ತಜ್ಞ ಯು.ಎನ್.ರವಿಕುಮಾರ್, ಮುಕ್ತ ವಿವಿ ಪ್ರಭಾರ ಕುಲಪತಿ ಖಾದರ್ ಪಾಷಾ, ಆಶ ಕಿಸಾನ್ ಸ್ವರಾಜ್ ಸಂಸ್ಥೆ ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net