

ಮಂಗಳೂರು/ಗುರುಪುರ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಬಿಗು ತಪಾಸಣೆಯಿರುವ ಕಾರಣ ಅಕ್ರಮವಾಗಿ ಕೇರಳದಿಂದ ಸಮುದ್ರ ಕಿನಾರೆ ಹಾಗೂ ನದಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಗಡಿ ಪ್ರವೇಶಿಸಿದ 7 ಮಂದಿಯನ್ನು ಬಜಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ತಪಾಸಣೆ ನಡೆಸಿ ನಗರದ ಇಎಸ್‌ಐ ಆಸ್ಪತ್ರೆಗೆ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ.
ಮೂಲತ ಮಂಗಳೂರಿನ ಅಡ್ಡೂರು ಕಾಂಜಿಲಕೋಡಿ ನಿವಾಸಿ ಯಾಕೂಬ್(48), ಆತನ ಪತ್ನಿ ಜೋಹರಾ (45), ಅಳಿಯ ಹಂಜಾ(29), ಮಕ್ಕಳಾದ ರುಕ್ಸಾನ್(24), ರುಮಾನ್(19) ಸೇರಿದಂತೆ ಅಪ್ರಾಪ್ತರು ಸೇರಿದಂತೆ ಒಟ್ಟು 7 ಮಂದಿ ಅಕ್ರಮ ಪ್ರವೇಶ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮನೆಗೆ ತಲುಪಿಸಿದ ಕಾರು ಚಾಲಕ ಶಾಕೀರ್ ಕೂಡ ಆರೋಪಿ. ಇಬ್ಬರು ಅಪ್ರಾಪ್ತರನ್ನು ಹೊರತುಪಡಿಸಿ 6 ಮಂದಿ ಮೇಲೆ ಬಜಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅಡ್ಡೂರು ನಿವಾಸಿಯಾಗಿರುವ ಯಾಕೂಬ್ ಮತ್ತಿತರರು ಅಕ್ರಮವಾಗಿ ಗಡಿ ಪ್ರವೇಶ ಮಾಡಿರುವ ಬಗ್ಗೆ ಬಜಪೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. ಕೂಡಲೇ ಪೊಲೀಸರು ಆತನ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ಮೊದಲಿಗೆ ಯಾಕುಬ್ ತಾನು ದೇರಳಕಟ್ಟೆಯಿಂದ ಬಂದಿರುವುದಾಗಿ ತಿಳಿಸಿದ್ದಾನೆ. ಬಳಿಕ ಆತನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ‘ಏ.9ರಂದು ಮಧ್ಯಾಹ್ನ 1.30ಕ್ಕೆ ಹೊಸಂಗಡಿಯಿಂದ ರಿಕ್ಷಾದ ಮೂಲಕ ಕೇರಳದ ಚೆಕ್‌ಪೋಸ್ಟ್‌ನವರೆಗೆ ಬಂದು ಬಳಿಕ ಕರ್ನಾಟಕ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ಇರುವುದರಿಂದ ತಲಪಾಡಿಗೆ ಹೊಂದಿಕೊಂಡಿರುವ ರೈಲು ಪಟ್ಟಿಯ ಮೂಲಕ ಬಂದು ನದಿಯಲ್ಲಿ ದೋಣಿ ಮೂಲಕ ಕೆ.ಸಿ.ರೋಡ್‌ಗೆ ಬಂದಿದ್ದೇವೆ. ಬಳಿಕ ಪಾಂಡೇಶ್ವರ ನಿವಾಸಿ ಶಾಕೀರ್ ಎಂಬಾತ ಕಾರಿನಲ್ಲಿ ಅಡ್ಡೂರಿಗೆ ಬಿಟ್ಟು ಹೋಗಿದ್ದಾನೆ’ ಎಂದು ತಿಳಿಸಿದ್ದಾನೆ.
ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನದಿ ಮೂಲಕ ಗಡಿ ಪ್ರವೇಶ ಮಾಡಿರುವುದು ಕಾನೂನು ಉಲ್ಲಂಘನೆ. ಈ ಹಿನ್ನೆಲೆಯಲ್ಲಿ ಪೊಲೀಸರು 6 ಮಂದಿ ಮೇಲೆ ಕೇಸು ದಾಖಲಿಸಿದ್ದಾರೆ.