ಬೆಟ್ಟಿಂಗ್ ಜಾಲ ಮಟ್ಟ ಹಾಕುವ ಗುರಿ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Keragodu Volleyball Premier League Mandya
Published on
ಮಂಡ್ಯ: ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಯುವಕರನ್ನು ತಪ್ಪುದಾರಿಗೆ ಎಳೆದು, ಬೆಟ್ಟಿಂಗ್ ಜಾಲಕ್ಕೆ ದೂಡುತ್ತಿರುವ ದುಷ್ಟಶಕ್ತಿಗಳನ್ನು ಮಟ್ಟ ಹಾಕುವುದೇ ನನ್ನ ಮುಂದಿನ ಗುರಿ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಆಯೋಜಿಸಿದ್ದ 'ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್'ನಲ್ಲಿ ಮಾತನಾಡಿದ ಅವರು, 'ಬೆಟ್ಟಿಂಗ್ ಜೂಜುಕೋರರಿಂದ ಮನೆಗಳು ಹಾಳಾಗುತ್ತಿವೆ. ಬಾಳಿ ಬದುಕಬೇಕಾದ ವಯಸ್ಸಿನ ಹುಡುಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆಡಿಸುತ್ತಿರುವವರ ಆಟ ಇನ್ಮುಂದೆ ನನ್ನ ಮಂಡ್ಯ ಕ್ಷೇತ್ರದಲ್ಲಿ ನಡೆಯವುದಿಲ್ಲ' ಎಂದರು.
ಬೆಟ್ಟಿಂಗ್ ಭೂಗತ ಜಾಲವನ್ನು ಮಟ್ಟಹಾಕಲು ಈಗಾಗಲೇ ವಿಧಾನಸಭೆಯಲ್ಲಿ ದನಿ ಎತ್ತಿದ್ದೇನೆ. ಜೀವವನ್ನೇ ತೆಗೆಯುವ ಈ ಅಪಾಯಕಾರಿ ಜೂಜು ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡುವ ಮಾತೇ ಇಲ್ಲ. ಊರು ನೆಮ್ಮದಿಯಾಗಿರಬೇಕೆಂದರೆ ಜೂಜುಕೋರ ದುಷ್ಟಶಕ್ತಿಗಳನ್ನು ನಿಯಂತ್ರಿಸಲೇಬೇಕು ಎಂದರು.
ಟೂರ್ನಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ತಂದಿದೆ. ಮುಂದೆ, ಇದೇ ಮಾದರಿಯಲ್ಲಿ 50 ಹಳ್ಳಿಗಳ ವಾಲಿಬಾಲ್ ತಂಡಗಳನ್ನು ಗುರುತಿಸಿ ದೊಡ್ಡ ಮಟ್ಟದಲ್ಲಿ 'ಮಂಡ್ಯ ವಾಲಿಬಾಲ್ ಲೀಗ್' ಆಯೋಜಿಸಿದರೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದೇನೆ ಎಂದು ಹೇಳಿದರು.
ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಅಧ್ಯಕ್ಷ ಮಂಗಲ ಯೋಗೀಶ್, ವಿನಯ್‌ಕುಮಾರ್,  ದ್ಯಾಪಸಂದ್ರ ಶಂಕರಲಿಂಗೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net